ಮಡಿಕೇರಿ, ಅ. 4: ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಬಳಿಯ ಕಂಡಂಗಾಲ ಗ್ರಾಮದ ಸುತ್ತಮುತ್ತ ನಿರಂತರವಾಗಿ ನಡೆಯುತ್ತಿರುವ ಮರಳು ದಂಧೆ ವಿರುದ್ಧ ಮರೋಡಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಂಬಂಧಿಸಿದ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.ಈ ಬಗ್ಗೆ ಮರೋಡಿ ಯುವಕ ಸಂಘ ಹಾಗೂ ಅಲ್ಲಿನ ಗ್ರಾಮಸ್ಥರು ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಅಧೀಕ್ಷಕರು, ಅಪರ ಜಿಲ್ಲಾಧಿಕಾರಿಗಳ ಸಹಿತ ಜನಪ್ರತಿನಿಧಿಗಳಿಗೆ ಸೂಕ್ತ ಕ್ರಮಕ್ಕೆ ಕೋರಿ ಮನವಿ ಸಲ್ಲಿಸಿದ್ದು, ವಿವರ ಕೆಳಗಿನಂತಿದೆ.
ಕಂಡಂಗಾಲ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಮರಳು ದಂಧೆಯು ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ ಗ್ರಾಮದ ಸುತ್ತಮುತ್ತಲಿನ ಜನರು ದಿನನಿತ್ಯ ಒಂದಲ್ಲಾ ಒಂದು ತರಹದ ಪ್ರಕರಣ ಗಳಿಂದ ತಮ್ಮ ನೆಮ್ಮದಿಯನ್ನು ಕಳೆದು ಕೊಳ್ಳುತ್ತಿದ್ದಾರೆ. ಗದ್ದೆಗಳಿಂದ ಮಣ್ಣನ್ನು ತೆಗೆದು ಅದನ್ನೆಲ್ಲಾ ಶುದ್ಧಿಕರಿಸಿ ಮರಳು ತೆಗೆದು ಮಾರಾಟ ಮಾಡಿ
(ಮೊದಲ ಪುಟದಿಂದ) ಹಲವಾರು ಭತ್ತದ ಗದ್ದೆಗಳೇ ಮಾಯವಾಗಿವೆ. ಪಕ್ಕದ ಹೊಳೆಯಿಂದ ಹಿಟಾಚಿ ಯಂತ್ರಗಳ ಮೂಲಕ ಮರಳು ತೆಗೆದು ಹೊಳೆಯ ಸ್ವರೂಪ (ದಿಕ್ಕು) ಬದಲಾಗಿ ಅಕ್ಕ ಪಕ್ಕದ ತೋಟ ಹಾಗೂ ಮನೆ ಮಠಗಳಿಗೆ ತೀವ್ರವಾದ ಹಾನಿಯುಂಟಾಗಲಾರಂಭಿಸಿದೆ. ಗ್ರಾಮದ ರಸ್ತೆ ಸ್ಥಿತಿಯಂತೂ ಹೇಳಲಾರದ ಸ್ಥಿತಿಗೆ ತಲುಪಿದೆ.
ಮರಳು ಮಾಫಿಯಾ ಮುಂದುವರೆದು ಕೆಲವರು ಹೊಳೆ ಬದಿಯ ನಿವಾಸಿಗಳಿಗೆ ಹಾಗೂ ಇದನ್ನು ಪ್ರಶ್ನಿಸಿದವರಿಗೆ ಅನಾಮಧೇಯ ದೂರವಾಣಿ ಕರೆಗಳ ಮುಖಾಂತರ ಜೀವ ಬೆದರಿಕೆಯನ್ನು ಒಡ್ಡುವ ಪರಿಸ್ಥಿತಿಯು ಇಂದು ನಿರ್ಮಾಣವಾಗಿದೆ. ಗ್ರಾಮಗಳ ಜನರು ಮತ್ತು ಸಂಘದ ಸದಸ್ಯರುಗಳು ಮರಳು ದಂಧೆಕೋರರ ಬೆದರಿಕೆಯ ನೆರಳಲ್ಲಿ ಜೀವಸಾಗಿಸುವ ದುರಂತಕ್ಕೆ ಬಂದು ತಲುಪುವಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಕುಟ್ಟಂದಿ ಗ್ರಾಮದ ಖಾಸಗಿ ತೋಟದ ಪಕ್ಕದಲ್ಲಿ ಕೆಲವರು ನದಿಗೆ ಅಡ್ಡಲಾಗಿ ಬಿದ್ದ ಹೆಬ್ಬಲಸು ಮರವನ್ನು ಕತ್ತರಿಸಿ ನಾಟಾಗಳಾಗಿ ಪರಿವರ್ತಿಸಿ ಮರವನ್ನು ಕತ್ತರಿಸಿದ್ದನ್ನು ಪ್ರಶ್ನಿಸಿದ ಮಾಲೀಕರನ್ನು ಬೆದರಿಸಿದ್ದಾರೆ. ಅಲ್ಲದೆ ತೋಟದ ಪಕ್ಕದಲ್ಲಿ ಮರಳು ತೆಗೆಯುವದನ್ನು ಪ್ರಶ್ನಿಸಿದಕ್ಕೆ ಇದೇ ಗ್ರಾಮದ ಕೆಲವರು ಜೀವ ಬೆದರಿಕೆ ಹಾಕಿದ್ದಾರೆ.
ಇದೇ ಬೆಳವಣಿಗೆ ಮುಂದುವರೆದಿದೇ ಆದರೆ ಮರಳು ದಂಧೆಯಿಂದಾಗಿ ನಮ್ಮ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗುವದಲ್ಲದೆ, ಕೊಲೆ ಪ್ರಕರಣಗಳು ನಡೆಯುವದರಲ್ಲಿ ಸಂದೇಹವಿಲ್ಲ.