ಸೋಮವಾರಪೇಟೆ, ಅ. 4: ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ತಾ. 8 ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಎರಡನೇ ವರ್ಷದ ಓಣಂ ಉತ್ಸವ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ವಿ.ಎಂ. ವಿಜಯ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ಸಮಾಜ ಬಾಂಧವರಿಗೆ ಪೂಕಳಂ ಸ್ಪರ್ಧೆ, ಶಾಲಾ ಮಕ್ಕಳಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸದಸ್ಯರ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಂದು ಬೆಳಿಗ್ಗೆ 7 ಗಂಟೆಯಿಂದ 9ರವರೆಗೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಪೂಕಳಂ ಸ್ಪರ್ಧೆ ನಡೆಯಲಿದ್ದು, 9 ಗಂಟೆಗೆ ಇಲ್ಲಿನ ಕಕ್ಕೆಹೊಳೆ ಬಳಿಯ ಮುತ್ತಪ್ಪ ದೇವಸ್ಥಾನದಿಂದ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಿಂಗಾರಿ ಮೇಳದೊಂದಿಗೆ ಓಣಾಘೋಷ ಯಾತ್ರೆ ನಡೆಯಲಿದೆ. ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್ ಮತ್ತು ಉತ್ಸವ ಸಮಿತಿ ಅಧ್ಯಕ್ಷ ವಿ.ಎಂ. ವಿಜಯ ವಹಿಸಲಿದ್ದಾರೆ. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಚಿವ ಬಿ.ಎ. ಜೀವಿಜಯ, ಹಿರಿಯ ವಕೀಲ ಚಂದ್ರಮೌಳಿ, ಗೌಡಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಭರತ್ಕುಮಾರ್, ಸಲಹೆಗಾರ ವಿ.ಕೆ. ಲೋಕೇಶ್ ಅವರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಮಧ್ಯಾಹ್ನ 12.30ಕ್ಕೆ ಓಣಂ ಸದ್ಯ ಆಯೋಜಿಸಲಾಗಿದ್ದು, 3 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. 1 ರಿಂದ 3ನೇ ತರಗತಿ, 4 ರಿಂದ 7ನೇತರಗತಿ, ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ವಿ.ಎಂ. ವಿಜಯ ತಿಳಿಸಿದ್ದಾರೆ.