ಮಡಿಕೇರಿ, ಅ. 4: ಹಿರಿಯರಿಗೆ ಗೌರವ ನೀಡುವದರ ಜೊತೆಗೆ ಸಲಹೆ ಮಾರ್ಗದರ್ಶನ ಪಡೆದು ಯುವ ಜನರು ಮುನ್ನಡೆಯಬೇಕು ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಸಲಹೆ ಮಾಡಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿರಿಯರು-ಕಿರಿಯರನ್ನು ಮತ್ತು ಕಿರಿಯರು-ಹಿರಿಯರನ್ನು ಗೌರವಿಸುವಂತಾದರೆ ಕುಟುಂಬದಲ್ಲಿ ಅನ್ಯೋನ್ಯ ಜೀವನ ಕಾಣಬಹುದು. ಕುಟುಂಬ &divound;ರ್ವಹಣೆಯಲ್ಲಿ ಹಿರಿಯರ ಪಾತ್ರ ಮಹತ್ತರವಾಗಿದೆ. ಯಾವದೇ ಸಮಸ್ಯೆಯನ್ನು &divound;ಭಾಯಿಸಲು ಹಿರಿಯರ ಸಹಕಾರ ಮತ್ತು ಮಾರ್ಗದರ್ಶನ ಯುವಕರಿಗೆ ಅತ್ಯಗತ್ಯ ಎಂದು ವಿಜು ಸುಬ್ರಮಣಿ ಅವರು ಹೇಳಿದರು.

ರೇಷ್ಮೆ ಮಾರಾಟ ಮಂಡಳಿ ರಾಜ್ಯ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಹಿರಿಯರ ಮಾರ್ಗದರ್ಶನ ಪಡೆದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳ ಬಹುದಾಗಿದೆ. ಹಿರಿಯರ ಅನುಭವದ ಮಾತು ಕೇಳಿ ಮುನ್ನಡೆಯಬೇಕು ಎಂದು ಸಲಹೆ ಮಾಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಹನುಮಂತಪ್ಪ ಅವರು ಮಾತನಾಡಿ, ಹಿರಿಯ ನಾಗರಿಕರಿಗೆ ಅನೇಕ ಕಾನೂನು, ಕಾಯ್ದೆಗಳಿವೆ, ಆದರೂ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು, ಎಲ್ಲರೊಂದಿಗೂ ಒಟ್ಟುಗೂಡಿ ಉತ್ತಮ ಬದುಕು ನಡೆಸುವಂತಾಗಬೇಕು ಎಂದು ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಮಾತನಾಡಿ, ಹಿರಿಯರು ಅಪಾರ ಜ್ಞಾನ ಹಾಗೂ ಅನುಭವ ಹೊಂದಿದ್ದಾರೆ. ಹಿರಿಯರು ಸಮಾಜದ ಆಸ್ತಿಯಾಗಿದ್ದು ಯುವಜನರು ಹಿರಿಯರ ಮಾರ್ಗದರ್ಶನ ಪಡೆಯಬೇಕು. ಜೊತೆಗೆ ಹಿರಿಯ ನಾಗರಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದು ಜೀವನ ಉತ್ತಮಪಡಿಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.

ಉಪ ವಿಭಾಗಾಧಿಕಾರಿ ಡಾ. ನಂಜಂಡೇ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿ ಕಾರ್ಯ ನಿರ್ವಹಿಸುತ್ತಿದ್ದು ಹೆಚ್ಚಿನದಾಗಿ ಜೀವನಾಂಶ ಹಾಗೂ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ ಎಂದರು.

ವಕೀಲ ಮನೋಜ್ ಬೋಪಯ್ಯ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಮಮ್ತಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇಶ ಸೇವೆಗಾಗಿ ಪರದಂಡ ಚಂಗಪ್ಪ (ವೀರಾಜಪೇಟೆ), ಸಂಗೀತ ವಿದೂಷಿ ಜಯಲಕ್ಷ್ಮಿ (ಮಡಿಕೇರಿ) ಮತ್ತು ಸಮಾಜ ಸೇವೆಗಾಗಿ ನಂಜುಂಡಪ್ಪ ಶಿರಂಗಾಲ (ಸೋಮವಾರಪೇಟೆ) ಇವರನ್ನು ಸನ್ಮಾನಿಸಲಾಯಿತು.

ಹಿರಿಯ ನಾಗರಿಕರ ಫೋರಂನ ತಿಮ್ಮಯ್ಯ, ಮಡಿಕೇರಿ ಸ್ತ್ರೀ ಶಕ್ತಿ ವೃದ್ಧಾಶ್ರಮ ಮೇಲ್ವಿಚಾರಕ ಸತೀಶ್ ಇತರರು ಇದ್ದರು. ಅಖಿಲ ಮತ್ತು ತಂಡದವರು ಪ್ರಾರ್ಥಿಸಿದರೆ, ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ದೇವರಾಜು ಸ್ವಾಗತಿಸಿದರು. ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ನಿರೂಪಿಸಿ, ವಂದಿಸಿದರು.