ಮೂರ್ನಾಡು, ಅ. 4: ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಹಾಕತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಆರ್. ಶಾರದ ಅಭಿಪ್ರಾಯ ವ್ಯಕ್ತಪಡಿಸಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏಳು ದಿನಗಳ ಕಾಲ ಆಯೋಜಿಸಲಾದ ವಿಶೇಷ ವಾರ್ಷಿಕ ಶಿಬಿರವನ್ನು ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬರಲ್ಲೂ ಸೇವೆಯ ಅರಿವು ಮೂಡಿದಾಗ ದೇಶದ ಅಭಿವೃದ್ಧಿ ಸಾಧ್ಯ. ಮನುಷ್ಯರ ಮನಸ್ಸು ಶುದ್ದವಿದ್ದರೆ ಗ್ರಾಮ ಕೂಡ ಸ್ವಚ್ಛತೆಯಿಂದ ಕೂಡಿರುತ್ತದೆ ಎಂದು ತಿಳಿಸಿ ಶಿಬಿರದಿಂದ ಅನೇಕ ಪ್ರಯೋಜನ ಗಳಿದ್ದು, ಅವುಗಳನ್ನು ಶಿಬಿರಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆನೀಡಿದರು.

ಸಿಂಡಿಕೇಟ್ ಬ್ಯಾಂಕ್‍ನ ನಿವೃತ್ತ ಡಿವಿಷನ್ ವ್ಯವಸ್ಥಾಪಕ ಅಮ್ಮಟ್ಟಂಡ ಚಿಣ್ಣಪ್ಪ ಧ್ವಜಾರೋಹಣ ಗೈದು ಮಾತನಾಡಿ, ಈಗಿನ ವ್ಯವಸ್ಥೆಯಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಿ ಕೊಳ್ಳಲು ಹಲವಾರು ಯೋಜನೆಗಳು, ಘಟಕಗಳು ಇವೆ. ಹಿಂದಿನ ಕಾಲದಲ್ಲಿ ಸೇವೆ ಶ್ರಮದಾನ, ಸ್ವಚ್ಛತಾ ಕಾರ್ಯಗಳು ಇದ್ದವು, ಆದರೆ ಅದಕ್ಕೊಂದು ರೂಪುರೇಖೆ ಇರುತ್ತಿರಲ್ಲಿಲ್ಲ ಎಂದು ತಿಳಿಸಿ ಶಿಸ್ತು, ಸಮಯ ಪರಿಪಾಲನೆಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮೂರ್ನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ರಾಜ ಮಾದಪ್ಪ, ಹಾಕತ್ತೂರು ಕಾಫಿ ಬೆಳೆಗಾರ ಅಮ್ಮಟಂಡ ಅಪ್ಪಣ್ಣ, ಹಾಕತ್ತೂರು ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಅಬೂಬಕರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಯು.ಸಿ. ಮಾಲತಿ ಇತರರು ಹಾಜರಿದ್ದರು. ಶಿಬಿರಾರ್ಥಿ ರಂಜಿನಿ ತಂಡ ಪ್ರಾರ್ಥಿಸಿ, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಯು.ಸಿ. ಮಾಲತಿ ಸ್ವಾಗತಿಸಿ, ದಮಯಂತಿ ವಂದಿಸಿದರು.