ಶ್ರೀಮಂಗಲ, ಅ. 5: ಭಾರತ ದೇಶವು ತನ್ನ ಆಂತರಿಕ ಬೇಡಿಕೆ ಪೂರೈಸಿ ಉಳಿದ ಕರಿಮೆಣಸನ್ನು ರಫ್ತು ಮಾಡುವಷ್ಟು ಉತ್ತಮ ಕರಿಮೆಣಸನ್ನು ಬೆಳೆಯುತ್ತಿದ್ದು, ದೇಶದ ಬೆಳೆಗಾರರÀ ಹಿತಾಸಕ್ತಿಗೆ ಧಕ್ಕೆ ತರುವಂತೆ ಅನಗತ್ಯವಾಗಿ ವಿಯೆಟ್ನಾಮ್ ದೇಶದಿಂದ ಕಳಪೆ ಕರಿಮೆಣಸನ್ನು ಆಮದು ಮಾಡಿಕೊಳ್ಳುವದನ್ನು ತಕ್ಷಣದಿಂದಲೇ ನಿಲ್ಲಿಸಿ ದೇಶಿಯ ರೈತರನ್ನು ರಕ್ಷಣೆ ಮಾಡಲು ಮುಂದಾಗದಿದ್ದರೆ, ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆ ಹಾಗೂ ರೈತರ ಬೆಂಬಲದೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ನಿರ್ಣಯವನ್ನು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಸಭೆಯಲ್ಲಿ ಕೈಗೊಳ್ಳಲಾಯಿತು.
ಸಂಘದ ಜಿಲ್ಲಾಧ್ಯಕ್ಷ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕರಿಮೆಣಸನ್ನು ಬೆಳೆಯುವ ಪ್ರಮುಖ ಜಿಲ್ಲೆಯಾದ ಕೊಡಗಿನಲ್ಲಿ, ಕಾಫಿ ದರ ಕುಸಿತ, ನಿರ್ವಹಣೆ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಆಸರೆಯಾಗಿದ್ದ ಕರಿಮೆಣಸು ಇದೀಗ ಆಮದಾಗುವ ಮೂಲಕ ಶೇ. 50 ರಷ್ಟು ದರ ಕುಸಿತ ಕಂಡಿದೆ. ಅಲ್ಲದೆ, ಆಮದು ಮಾಡಿಕೊಳ್ಳುವ ಕರಿಮೆಣಸಿನಿಂದ ವ್ಯಾಪಾರಿಗಳು ಬೃಹತ್ ಪ್ರಮಾಣದ ಲಾಭಗಳಿಸಲು ಸರ್ಕಾರದ ಆಮದು ನೀತಿ ಅವಕಾಶ ಮಾಡಿ ಕೊಟ್ಟಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಾಕ್ತವಾಯಿತು.
(ಮೊದಲ ಪುಟದಿಂದ) ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಕರಿಮೆಣಸು ಆಮದು ಪ್ರಕರಣ, ಗೋಣಿಕೊಪ್ಪ ಎಪಿಎಂಸಿಯಲ್ಲಿ ಕಲಬೆರಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ರಾಜಕೀಯ ಲಾಭಕ್ಕಾಗಿ ಹೇಳಿಕೆಗಳನ್ನು ನಿಲ್ಲಿಸಿ ಪಕ್ಷ ರಹಿತವಾಗಿ ಹೋರಾಟ ಮಾಡಬೇಕೆಂದು ಒತ್ತಾಯಿಸ ಲಾಯಿತು.
ನಮ್ಮ ಜನಪ್ರತಿನಿಧಿಗಳು ಬೆಳೆಗಾರರ ಅಸ್ಥಿತ್ವ ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಹೋರಾಟ ನಡೆಸಬೇಕು. ಇದು ಸಾಧ್ಯವಾಗದಿದ್ದರೆ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಗೋಣಿಕೊಪ್ಪ ಎಪಿಎಂಸಿ ಬೆಳೆಗಾರರ ಹಿತರಕ್ಷಣೆ ಮಾಡಲು ವಿಫಲರಾಗಿದ್ದು, ಕರಿಮೆಣಸು ಆಮದು ಮಾಡಿಕೊಂಡ ವ್ಯಾಪಾರಿಯನ್ನು ಸಮರ್ಥಿಸಿ ಕೊಳ್ಳುತ್ತಿರುವ ಜನಪ್ರತಿನಿಧಿಗಳ ಧೋರಣೆಯನ್ನು ಸಹಿಸಿಕೊಂಡು ಯಾವದೇ ರಾಜಕೀಯ ಪಕ್ಷಕ್ಕೆ ಕಾರ್ಯಕರ್ತನಾಗಿ ಕೆಲಸ ಮಾಡುವ ಅಗತ್ಯತೆ ಇಲ್ಲ. ಬೆಳೆಗಾರರು ಉಳಿದರೆ ಮಾತ್ರ ರಾಜಕೀಯ ಪಕ್ಷ ಉಳಿಯುತ್ತದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಳೆಗಾರರ ಪರ ಇಲ್ಲದ ಯಾವದೇ ರಾಜಕೀಯ ಪಕ್ಷ ಹಾಗೂ ಜನಪ್ರತಿನಿಧಿಗಳು ನಮಗೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕೇಂದ್ರ ವಾಣಿಜ್ಯ ಸಚಿವರನ್ನು ಸಂಘದ ನಿಯೋಗ ಭೇಟಿ ಮಾಡಿ ಈ ಬಗ್ಗೆ ಕರಿಮೆಣಸು ಹಾಗೂ ಕಾಫಿಯನ್ನು ಆಮದು ನಿಲ್ಲಿಸುವಂತೆ ಒತ್ತಾಯಿಸಲು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ವೀರಾಜಪೇಟೆ ತಾಲ್ಲೂಕು ಕಿಸಾನ್ ಸಂಘದ ಅಧ್ಯಕ್ಷ ಮುಕ್ಕಾಟಿರ ಪ್ರವೀಣ್ ಭೀಮಯ್ಯ, ಪ್ರ.ಕಾರ್ಯದರ್ಶಿ ನೂರೇರ ಮನೋಜ್, ಜಂಟಿ ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಜಿಲ್ಲಾ ಸಮಿತಿಯ ಸದಸ್ಯರಾದ ಕೊಟೇರ ಕಿಸಾನ್ ಉತ್ತಪ್ಪ, ಚೋಡುಮಾಡ ವಿಕ್ರಮ್, ಇಟ್ಟೀರ ಶರತ್ ಮತ್ತಿತರರು ಹಾಜರಿದ್ದರು.