ಸೋಮವಾರಪೇಟೆ, ಅ.5: ಮಠಮಾನ್ಯಗಳಿಂದ ಅಕ್ಷರ ಕ್ರಾಂತಿ ಮಾತ್ರವಲ್ಲದೆ ಗೋ ಸಂರಕ್ಷಣೆ ಯೊಂದಿಗೆ ಜಾತ್ಯತೀತ ಸಮಾಜ ನಿರ್ಮಾಣ ಕಾರ್ಯವೂ ನಡೆಯುತ್ತಿದೆ ಎಂದು ಮಹಾರಾಷ್ಟ್ರದ ಅಕ್ಕಲಕೋಟೆ ಮಠಾಧೀಶರಾದ ಶ್ರೀ ಚನ್ನಬಸವ ದೇವರು ಸ್ವಾಮೀಜಿ ಅಭಿಪ್ರಾಯಪಟ್ಟರು.ಇಲ್ಲಿನ ಸೋಮೇಶ್ವರ ದೇವಾಲಯ ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಶ್ರೀಕುಮಾರೇಶ್ವರ ಜಯಂತಿ ಮಹೋತ್ಸವ ಸಮಿತಿ ಹಾಗೂ ಪಟ್ಟಣದ ಸೋಮೇಶ್ವರ ದೇವಾಲಯದ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹಾನಗಲ್ಲ ಶ್ರೀಕುಮಾರ ಮಹಾಶಿವಯೋಗಿಗಳ 150ನೇ ಜಯಂತಿ ಅಂಗವಾಗಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.12ನೇ ಶತಮಾನದಿಂದಲೇ ಶಿವಶರಣರು, ಮಠಮಾನ್ಯಗಳು ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿವೆ. ಕಡು ಬಡತನದಲ್ಲಿ ಹುಟ್ಟಿದ ಹಾನಗಲ್ಲ ಶಿವಕುಮಾರ ಶಿವಯೋಗಿಗಳು 19ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಅಸಮಾನತೆ ವಿರುದ್ಧ ಹೋರಾಡಿದರು. ಕೇವಲ ಮೇಲ್ವರ್ಗದವರಿಗೆ ಮೀಸಲಾಗಿದ್ದ ಶಿಕ್ಷಣ ವ್ಯವಸ್ಥೆಗೆ ಕಡಿವಾಣ ಹಾಕಲು ಮಠದ ಮೂಲಕವೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಎಲ್ಲಾ ವರ್ಗದ ಬಡಮಕ್ಕಳಿಗೆ ಶಿಕ್ಷಣ ಒದಗಿಸಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದರು ಎಂದು ಸ್ವಾಮೀಜಿ ಬಣ್ಣಿಸಿದರು.
ಗೋರಕ್ಷಣೆಗೆ 19ನೇ ಶತಮಾನದಲ್ಲೇ ಮುಂದಾಗಿದ್ದ ಸ್ವಾಮೀಜಿಗಳು ಸಾಕಲು ಸಾಧ್ಯವಾಗದ ಗೋವುಗಳನ್ನು ಮಠಕ್ಕೆ ಒಪ್ಪಿಸಿಕೊಂಡು ಸಲಹುತ್ತಿದ್ದರು. ಗಾಯಕಯೋಗಿ ಪಂಚಾಕ್ಷರ ಗವಾಯಿ
(ಮೊದಲ ಪುಟದಿಂದ) ಹಾಗೂ ಪುಟ್ಟರಾಜ ಗವಾಯಿಗಳಂತಹ ಅಂದರು ಮತ್ತು ವಿಕಲಚೇತನರಿಗೆ ಸಂಗೀತ ಶಿಕ್ಷಣ ಒದಗಿಸುವ ಮೂಲಕ ಸಮಾನತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು ಎಂದು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುದ್ದಿನಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠಮಾನ್ಯಗಳು ಎಲ್ಲಿಯೂ ಸ್ವಾರ್ಥಪರ ಚಿಂತನೆ ನಡೆಸದೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಇಂತಹ ಪರಂಪರೆಗೆ ನಾಂದಿ ಹಾಡಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ತತ್ವ ಆದರ್ಶಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶನವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ವಹಿಸಿದ್ದರು. ಬೆಳಗಾಂ ಹಿರೇಮಠಾಧೀಶರಾದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಗಲಕೋಟೆ ಬೂದಿಹಾಳ್ ಮಠಾಧೀಶರಾದ ಶ್ರೀ ಸಂಗಮೇಶ್ವರ ದೇವರು ಸ್ವಾಮೀಜಿ, ಸೋಮೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ್, ಪ್ರಮುಖರಾದ ಶ್ಯಾಂಸುಂದರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.