ಮಡಿಕೇರಿ, ಅ. 5: ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಗೆ ಒಟ್ಟು 222 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ವೇಳೆಗೆ 204 ಇಂಚು ಮಳೆಯಾಗಿತ್ತು. ಈ ಸಾಲಿನಲ್ಲಿ 18 ಇಂಚು ಅಧಿಕ ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಸರಾಸರಿ 117.31 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ವೇಳೆಗೆ 101.59 ಇಂಚು ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಈ ವರ್ಷಾರಂಭದಿಂದ ಇದುವರೆಗೆ ಸರಾಸರಿ 67.35 ಇಂಚು ಮಳೆಯಾಗಿದ್ದು, ಕಳೆದ ಸಾಲಿನಲ್ಲಿ ಇದೇ ಅವಧಿಗೆ 47.04 ಇಂಚು ಮಳೆ ದಾಖಲಾಗಿತ್ತು.
ಸೋಮವಾರಪೇಟೆ ತಾಲೂಕಿಗೆ ಈ ಸಾಲಿನಲ್ಲಿ ಒಟ್ಟು 65.53 ಇಂಚು ಸರಾಸರಿ ಮಳೆಯಾಗಿದ್ದು, ಕಳೆದ ವರ್ಷ ಇದೇ ಸಮಯಕ್ಕೆ 51.04 ಇಂಚು ಮಾತ್ರ ಸರಾಸರಿ ಮಳೆಯಾಗಿತ್ತು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಗಾಳಿಬೀಡು ಸುತ್ತಮುತ್ತಲಿನ ಮುಟ್ಲು, ಹಮ್ಮಿಯಾಲ, ಕುಂಬಾರಗಡಿಗೆ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಕೂಡ 230 ಇಂಚುಗಳಷ್ಟು ಮಳೆ ದಾಖಲಾಗಿದೆ. ಪ್ರಸಕ್ತ ದಿನಗÀಳಲ್ಲಿ ಕೂಡ ಅಲ್ಲಲ್ಲಿ ಮಳೆಯಾಗುತ್ತಿದೆ. ಹಾಗೆಯೇ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರಸಕ್ತ ಸಾಲಿನಲ್ಲಿ 122.80 ಇಂಚು ಮಳೆ ದಾಖಲಾಗಿದ್ದು, ಕಳೆದ ಸಾಲಿನಲ್ಲಿ ಇದೇ ಅವಧಿಗೆ 119.45 ಇಂಚು ಮಳೆಯಾಗಿತ್ತು.
ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಅಪರಾಹ್ನ ಬಳಿಕ ಗುಡುಗು ಸಿಡಿಲು ಸೇರಿದಂತೆ ಸುಮಾರು 2 ಗಂಟೆಗಳ ಸಮಯ ಧಾರಕಾರ ಮಳೆ ಸುರಿದಿದೆ. ಜಿಲ್ಲೆಯ ಅಲ್ಲಲ್ಲಿ ಮಳೆಯಾದ ಕುರಿತು ವರದಿಯಾಗಿದೆ.
ಹಾರಂಗಿ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.68 ಅಡಿಗಳು, ಕಳೆದ ವರ್ಷ 2855.35 ಅಡಿ. ಇಂದಿನ ನೀರಿನ ಒಳ ಹರಿವು 751 ಕ್ಯೂಸೆಕ್, ಕಳೆದ ವರ್ಷ ಇದೇ ಅವಧಿಗೆ ಒಳಹರಿವು 2203 ಕ್ಯೂಸೆಕ್, ಹೊರಹರಿವು ನದಿಗೆ 1708, ನಾಲೆಗೆ 100 ಕ್ಯೂಸೆಕ್.