*ಗೋಣಿಕೊಪ್ಪಲು, ಅ. 5: ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ ರೂ. 49,40,465 ಲಾಭಗಳಿಸಿದೆ. ಸದಸ್ಯರಿಗೆ ಶೇ. 25 ರಷ್ಟು ಡೆವಿಡೆಂಟ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಹೇಳಿದರು.

ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1935 ರಲ್ಲಿ ಸ್ಥಾಪನೆಯಾದ ಸಂದರ್ಭ 1198 ಇದ್ದು ರೂ. 98.33 ಲಕ್ಷ ಪಾಲು ಬಂಡವಾಳವಿತ್ತು. ಇದೀಗ ರೂ. 95.34 ಲಕ್ಷ ಕ್ಷೇಮನಿಧಿ ಸೇರಿದಂತೆ ರೂ. 200.51 ಲಕ್ಷ ವಿವಿಧ ನಿಧಿಗಳನ್ನು ಕ್ರೋಢೀಕರಿಸಲಾಗಿದೆ ಎಂದರು.

ಕಳೆದ ಸಾಲಿನಲ್ಲಿ ರೂ. 6.81 ಕೋಟಿ ವ್ಯವಹಾರ ನಡೆಸಲಾಗಿದೆ. ರೂ. 664 ಲಕ್ಷ ಕೆಸಿಸಿ ಸಾಲ, ರೂ. 637 ಲಕ್ಷ ಪಿಗ್ಮಿ, ವ್ಯಾಪಾರ, ಚಿನ್ನಾಭರಣ ಸೇರಿದಂತೆ ಒಟ್ಟು ರೂ. 13.01 ಕೋಟಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ಕೆಲಸಗಳಿಗಾಗಿ ಮರೂರು ಕೃಷಿ ಪ್ರಾಂಗಣದಲ್ಲಿ ಕಾಫಿ ತೋಟ, ಕಚೇರಿ ಸುತ್ತಲೂ ಆವರಣ ತಡೆಗೋಡೆ ನಿರ್ಮಿಸಲಾಗಿದೆ. ಕಂಪ್ಯೂಟರ್ ಸರ್ವರ್ ಸಾಫ್ಟ್‍ವೇರ್ ಆಧುನೀಕರಣಗೊಳಿಸಲಾಗಿದೆ. ವಿದ್ಯಾಭಿವೃದ್ಧಿ ನಿಧಿಯಿಂದ ತಿತಿಮತಿ, ದೇವರಪುರ, ಹೆಬ್ಬಾಲೆ ಪಟ್ಟಣ ಸರ್ಕಾರಿ ಶಾಲೆಗಳಿಗೆ ಪ್ರಿಂಟರ್, ಜೆರಾಕ್ಸ್, ಧ್ವನಿವರ್ಧಕಗಳನ್ನು ನೀಡಲಾಗಿದೆ. ಹೆದ್ದಾರಿ ಸುರಕ್ಷತೆಗಾಗಿ ಬ್ಯಾರಿಕೇಡ್ ನೀಡಲಾಗಿದೆ ಎಂದು ತಿಳಿಸಿದರು.

ಮುಂದೆ ದೇವರಪುರದಲ್ಲಿ ಬ್ಯಾಂಕಿಂಗ್ ಸೇವೆ ಆರಂಭಿಸ ಲಾಗುವದು. ಮರೂರು ಕೃಷಿ ಪ್ರಾಂಗಣದಲ್ಲಿ ಕಾವಲುಗಾರರ ಕೊಠಡಿ ನಿರ್ಮಾಣ ಹಾಗೂ ಕೊಳವೆ ಬಾವಿ ಕೊರೆಸಲಾಗುವದು ಎಂದು ಹೇಳಿ ಇದಕ್ಕೆ ಅನುಮೋದನೆ ಪಡೆದು ಕೊಂಡರು.

ರಾಜ್ಯ ಸರಕಾರದ ಸಾಲ ಮನ್ನಾ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು. ಉಪಾಧ್ಯಕ್ಷ ಪಿ.ಜೆ. ನಂಜಪ್ಪ, ಸದಸ್ಯರಾದ ಸಿ.ಎಂ. ಅಚ್ಚಯ್ಯ, ಜೆ.ಸಿ. ಅಶೋಕ್, ಕೆ.ಎಂ. ರಮೇಶ್, ಲಕ್ಷ್ಮಮ್ಮ, ಬಸವಣ್ಣ, ಶಿವಣ್ಣ, ಗೋವಿಂದ, ಕೆ.ಕೆ. ಪದ್ಮನಾಭ, ಸಿಇಒ ವಿ.ಎಸ್. ಸುಬ್ರಮಣಿ, ಪಿ.ಎಂ. ಕಾವೇರಮ್ಮ ಹಾಜರಿದ್ದರು.