*ಗೋಣಿಕೊಪ್ಪಲು, ಅ. 5: ಪ್ರಜ್ಞೆ ತಪ್ಪಿಸುವ ಗುಳಿಗೆಯನ್ನು ಮೂಗಿನ ಬಳಿ ತೋರಿಸಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಅನಾಮಿಕ ಮಹಳೆಯೊಬ್ಬರು ಅಪಹರಿಸಿರುವ ಘಟನೆ 5 ದಿನದ ಹಿಂದೆ ಗೋಣಿಕೊಪ್ಪಲಿನಲ್ಲಿ ಜರುಗಿದೆ. ತಿತಿಮತಿಯ ಕಾರ್ಮಿಕ ಮಹಿಳೆ ಜಾನಕಿ (45) ಮೋಸಕ್ಕೆ ಒಳಗಾದವರಾಗಿದ್ದಾರೆ.

ತಿತಿಮತಿಯ ಪುಟ್ಟಯ್ಯ ಅವರ ಪತ್ನಿ ಜಾನಕಿ ಮಾಸಿಕ ಚಿನ್ನದ ಚೀಟಿ ಹಣ ಕಟ್ಟಲು ಗೋಣಿಕೊಪ್ಪಲಿನ ಚಿನ್ನದ ಅಂಗಡಿಯೊಂದಕ್ಕೆ ಬಂದಿದ್ದಾರೆ. ಅಲ್ಲಿಂದ ಹೊರ ಬಂದು ತರಕಾರಿ ಕೊಳ್ಳಲು ಬಸ್ ನಿಲ್ದಾಣದ ಬಳಿಯ ಮಾರುಕಟ್ಟೆಗೆ ತೆರಳಿದಾಗ ಅಪರಿಚಿತ ಮಹಿಳೆಯೊಬ್ಬರು ಇವರನ್ನು ಹಿಂಬಾಲಿಸಿದ್ದಾರೆ. ತರಕಾರಿ ಅಂಗಡಿ ಬಳಿಗೆ ಹೋಗಿ ಜಾನಕಿಯನ್ನು ಮಾತನಾಡಿಸಿ ಇಲ್ಲಿ ಆಸ್ಪತ್ರೆ ಎಲ್ಲಿದೆ ತೋರಿಸಿ. ನಾವು ಹಿರಿಯೂರಿನವರು. ನಮ್ಮ ಮಗಳು ಗರ್ಭವತಿ ಯಾಗಿದ್ದಾಳೆ. ಈಗ 4 ತಿಂಗಳಾಗಿದೆ. ಯಾರೋ ನಮ್ಮ ಮಗಳಿಗೆ ಮೋಸ ಮಾಡಿದ್ದಾರೆ. ಅವಳಿಗೆ ಗರ್ಭಪಾತ ಮಾಡಿಸಬೇಕಾಗಿದೆ. ದಯವಿಟ್ಟು ಆಸ್ಪತ್ರೆ ತೋರಿಸಿ ಎಂದು ಕೇಳಿದ್ದಾಳೆ.

ಈ ಸಂದರ್ಭದಲ್ಲಿ ಜಾನಕಿ ಆಸ್ಪತ್ರೆಯ ದಿಕ್ಕು ತೋರಿಸಿ ತರಕಾರಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಈ ವೇಳೆಗೆ ಅಪರಿಚಿತ ಮಹಿಳೆ ತನ್ನ ಕೊರಳಲ್ಲಿದ್ದ ಸರ ತೋರಿಸಿ ಇದು ಚಿನ್ನದ ಸರ. 125 ಗ್ರಾಂ ತೂಕವಿದೆ. ಸುಮಾರು ರೂ 1.25 ಲಕ್ಷ ಬೆಲೆ ಬಾಳಲಿದೆ. ಇದಕ್ಕೆ ಕೇವಲ ಈಗ ರೂ. 35 ಸಾವಿರ ಕೊಡಿ. ಆಸ್ಪತ್ರೆಗೆ ತುರ್ತಾಗಿ ಬೇಕಾಗಿದೆ ಎಂದು ಅವಲತ್ತು ಕೊಂಡಿದ್ದಾಳೆ. ಅಷ್ಟರಲ್ಲಿ ಮತ್ತೊಬ್ಬ ಅಪರಿಚಿತ ವ್ಯಕ್ತಿ ಬಂದು ತಾನು ರೂ. 35 ಸಾವಿರ ಹಣ ಕೊಡುತ್ತೇನೆ. ನನಗೆ ಕೊಡು ಎಂದು ಕೇಳಿದ ಎನ್ನಲಾಗಿದೆ. ಇದನ್ನು ಅಪರಿಚಿತ ಮಹಿಳೆ ತಿರಸ್ಕರಿಸಿದ್ದಾಳೆ. ಈ ವೇಳೆಗೆ ಇದೇ ಮಹಿಳೆ ಜಾನಕಿ ಅವರ ಮೂಗಿನ ಬಳಿ ಮತ್ತು ಭರಿಸುವ ಸಣ್ಣ ಆಕಾರದ ಉಂಡೆಯೊಂದನ್ನು ತೋರಿಸಿದ್ದಾಳೆ. ಇದನ್ನು ಮೂಸಿದ ಜಾನಕಿಗೆ ಪ್ರಜ್ಞೆ ತಪ್ಪಿದೆ. ಈ ಸಂದರ್ಭದಲ್ಲಿ ಅಪರಿಚಿತ ಮಹಿಳೆ ಜಾನಕಿಯ ಕೊರಳಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾಳೆ.

ಕೆಲ ಹೊತ್ತು ಕಳೆದ ಬಳಿಕ ಜಾನಕಿ ಸಾವರಿಸಿಕೊಂಡು ನೋಡಲಾಗಿ ಕೊರಳಲ್ಲಿದ್ದ ಚಿನ್ನದ ಸರ ಕಾಣೆಯಾಗಿರುವದು ತಿಳಿದು ಬಂದಿದೆ. ಕಾರ್ಮಿಕ ಮಹಿಳೆಯಾದ್ದರಿಂದ ಕೂಡಲೇ ಪೊಲೀಸರಿಗೆ ದೂರು ಕೊಡಬೇಕು ಎಂಬದು ಗೊತ್ತಾಗಿಲ್ಲ. ಬಳಿಕ ಎಚ್ಚೆತ್ತುಕೊಂಡು ಬುಧವಾರ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ಹೋಗಿ ಮೌಖಿಕ ದೂರು ನೀಡಿದ್ದಾರೆ.

ಈ ಬಗ್ಗೆ ಠಾಣಾಧಿಕಾರಿ ಎಚ್.ವೈ. ರಾಜು ಅವರನ್ನು ಸಂಪರ್ಕಿಸಿದಾಗ ದಸರಾ ಸಂದರ್ಭದಲ್ಲಿ ಕೆಲವು ಕಳವಿನ ಪ್ರಕರಣಗಳು ನಡೆದಿವೆ. ಇದರ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಮೋಸ ಹೋದ ಮಹಿಳೆ ಜಾನಕಿ ಅವರ ಪತಿ ಪುಟ್ಟಯ್ಯ ತಿತಿಮತಿಯ ಅರಣ್ಯ ಕಚೇರಿಯಲ್ಲಿ 4ನೇ ದರ್ಜೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮೂಲತ ನಂಜನಗೂಡಿನವರಾಗಿದ್ದು, ಕಳೆದ 20 ವರ್ಷಗಳಿಂದ ತಿತಿಮತಿಯಲ್ಲಿ ನೆಲೆಸಿದ್ದಾರೆ.

- ವರದಿ : ಎನ್.ಎನ್.ದಿನೇಶ್