ಗೋಣಿಕೊಪ್ಪಲು, ಅ. 5: ಹಾಕಿ ಇಂಡಿಯಾ ಸಹಯೋಗದಲ್ಲಿ ಪುಣೆ ಎಸ್‍ಎನ್‍ಬಿಪಿ ಸಂಸ್ಥೆ ವತಿಯಿಂದ ನಡೆಯುತ್ತಿರುವ 16 ವಯೋಮಿತಿಯ ಆಲ್ ಇಂಡಿಯಾ ಹಾಕಿ ಟೂರ್ನಮೆಂಟ್‍ನಲ್ಲಿ ಹಾಕಿ ಕೂರ್ಗ್ ತಂಡ ಸೆಮಿಫೈನಲ್‍ಗೆ ಪ್ರವೇಶ ಪಡೆದಿದೆ. ಶುಕ್ರವಾರ ನಡೆಯುವ ಸೆಮಿಯಲ್ಲಿ ಶಾಹಿದ್ ಬಿಶನ್ ಸಿಂಗ್ ತಂಡದ ವಿರುದ್ಧ ಸೆಣೆಸಾಟ ನಡೆಸಲಿದೆ.ಅಲ್ಲಿನ ಎಸ್‍ಎನ್‍ಬಿಪಿ ಶಾಲಾ ಮೈದಾನದಲ್ಲಿ ಭಿಲ್ವಾರಾ ಹಾಕಿ ಅಕಾಡೆಮಿ ವಿರುದ್ದ ನಡೆದ ಕ್ವಾರ್ಟರ್ ಫೈನಲ್‍ನಲ್ಲಿ 10-0 ಗೋಲುಗಳ ಮೂಲಕ ಭರ್ಜರಿ ಗೆಲುವು ದಾಖಲಿಸಿ ಸೆಮಿಗೆ ಲಗ್ಗೆ ಇಟ್ಟಿತು. ತಂಡದ ಪರ ಗ್ಯಾನ್ ಗಣಪತಿ ಹಾಗೂ ರುಮೈಜ್ ತಲಾ 2 ಗೋಲು ಹೊಡೆದು ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಇವರೊಂದಿಗೆ ತರುಣ್, ಅಖಿಲ್, ಪೂವಣ್ಣ, ಗೌತಂ, ಗಣೇಶ್ ಹಾಗೂ ರಕ್ಷಿತ್ ತಲಾ ಒಂದು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು. ಶುಕ್ರವಾರ ಶಾಹಿದ್ ಬಿಶನ್ ಸಿಂಗ್ ತಂಡದ ವಿರುದ್ಧ ಸೆಮಿಯಲ್ಲಿ ಸ್ಪರ್ಧಿಸುವ ಮೂಲಕ ಫೈನಲ್‍ಗೇರಲು ಹೋರಾಟ ನಡೆಸಲಿದೆ.