ಸೋಮವಾರಪೇಟೆ, ಅ. 5: ದೇಶದ ಹಾಕಿ ಕ್ಷೇತ್ರಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಸೋಮವಾರಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಾಲ್ಕು ವರ್ಷಗಳೇ ಕಳೆದರೂ ಇಂದಿಗೂ ಮೈದಾನ ನಿರ್ಮಾಣವಾಗಿಲ್ಲ.

ಸ್ಥಳೀಯ ಕ್ರೀಡಾಭಿಮಾನಿಗಳ ಒಳ ಗುದ್ದಾಟಕ್ಕೆ ಬಲಿಯಾದ ಮೈದಾನ ಇದೀಗ ತನ್ನ ಅಂದವನ್ನೇ ಕಳೆದುಕೊಂಡು ಮಲಗಿದ್ದರೆ, ಮೈದಾನದ ಒಂದು ಬದಿ ಲಕ್ಷಾಂತರ ರೂಪಾಯಿ ವ್ಯಯಿಸಿ ತಡೆಗೋಡೆ ನಿರ್ಮಿಸಿದ್ದೇ ನಾಲ್ಕು ವರ್ಷಗಳ ಸಾಧನೆಯಂತಾಗಿದೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಬಿಡುಗಡೆಯಾಗಿರುವ ರೂ. 3.40 ಕೋಟಿ ಅನುದಾನದಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ 2017ರ ಮಾರ್ಚ್ 14 ಕ್ಕೆ ಬರೋಬ್ಬರಿ ನಾಲ್ಕು ವರ್ಷ ಪೂರ್ಣಗೊಂಡಿದ್ದು, 5ನೇ ವರ್ಷದತ್ತ ದಾಪುಗಾಲು ಹಾಕುತ್ತಿದೆ. ಆದರೆ ಇದುವರೆಗೂ ಕಿತ್ತಾಟಗಳಲ್ಲೇ ಮುಳುಗಿದ್ದರಿಂದ ಕಾಮಗಾರಿ ಪ್ರಾರಂಭಕ್ಕೆ ಇನ್ನೂ ಮುಹೂರ್ತವೇ ಕೂಡಿಬಂದಿಲ್ಲ.

ಕಳೆದ ತಾ. 14.03.2013ರಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಬಲದೇವಕೃಷ್ಣ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಶಿವಪ್ಪ ಅವರು ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಉಂಟಾದ ಕ್ರೀಡಾಪ್ರೇಮಿಗಳ ನಡುವಿನ ಭಿನ್ನಮತ ನಂತರದ ದಿನಗಳಲ್ಲೂ ಶಮನವಾಗದ ಹಿನ್ನೆಲೆ ಟರ್ಫ್ ಮೈದಾನ ಗಗನಕುಸುಮವಾಗಿಯೇ ಮುಂದುವರೆದಿದೆ.

ಕಳೆದ ಸಾಲಿನಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರ್ಕಾರದ ಕೊನೆಯ ದಿನಗಳಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ವಿಶೇಷ ಆಸಕ್ತಿಯಡಿ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆಂದು ರೂ. 3.40 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಅದರಂತೆ ಭೂಮಿಪೂಜೆಯೂ ನೆರವೇರಿತು.

ಇದಕ್ಕೂ ಮೊದಲು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಹಾಗೂ ಅಭಿಯಂತರರು ಮೈದಾನವನ್ನು ಪರಿಶೀಲಿಸಿದ್ದರು. ಇದರೊಂದಿಗೆ ಗ್ಲೋಬಲ್ ಸರ್ವೇಯನ್ನೂ ಮಾಡಲಾಗಿತ್ತು. ತಾ.14.03.2013 ರಂದು ಭೂಮಿಪೂಜೆಗೊಂಡ ಸಂದರ್ಭ ಕ್ರೀಡಾಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಟರ್ಫ್ ನಿರ್ಮಾಣವೇ ಆಗಿಹೋಯಿತು ಎಂಬಂತೆ ಸಂತೋಷಪಟ್ಟಿದ್ದರು. ಆದರೆ ನಂತರದ ದಿನಗಳಲ್ಲಿ ನಡೆದ ತೆರೆಮರೆಯ ಪ್ರಯತ್ನದಿಂದ ಟರ್ಫ್ ಮಾತ್ರ ನಿರ್ಮಾಣದತ್ತ ಹೆಜ್ಜೆ ಹಾಕಿಲ್ಲ.

ಟರ್ಫ್ ನಿರ್ಮಾಣಕ್ಕೆ ಆಕ್ಷೇಪ: ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿಂಥೆಟಿಕ್ ಟರ್ಫ್ ನಿರ್ಮಾಣ ಮಾಡಬೇಕೆಂಬ ಯೋಜನೆ ಜಾರಿಗೆ ಬಂದ ತಕ್ಷಣವೇ ಕೆಲವರು ಈ ಮೈದಾನದಲ್ಲಿ ಸಿಂಥೆಟಿಕ್ ಟರ್ಫ್ ನಿರ್ಮಾಣ ಸಾಧ್ಯವೇ ಇಲ್ಲ. ಟರ್ಫ್ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶ ಈ ಮೈದಾನದಲ್ಲಿಲ್ಲ ಎಂದು ತಗಾದೆ ತೆಗೆದಿದ್ದರು. ಈ ಬಗ್ಗೆ ಇಲಾಖೆ ನಡೆಸಿದ ಸರ್ವೇಯ ವರದಿಯಲ್ಲಿ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಿಸಬಹುದು ಎಂಬ ಬಗ್ಗೆ ಖಚಿತತೆಯಿದ್ದರೂ ಸಹ ಒತ್ತಡಗಳ ನಡುವೆ ಎಲ್ಲವೂ ಮಂಕಾಗಿದೆ.

ಬೇರೆ ಕ್ರೀಡೆಗಳಿಗೆ ಆಸ್ಪದವಿಲ್ಲ: ಇಲ್ಲಿ ಟರ್ಫ್ ನಿರ್ಮಿಸುವದು ಬೇಡ ಎಂದು ಹೇಳುವ ಗುಂಪಿನ ಮತ್ತೊಂದು ವಾದವೆಂದರೆ ಇಲ್ಲಿ ಟರ್ಫ್ ನಿರ್ಮಿಸಿದರೆ ಬೇರೆ ಕ್ರೀಡೆಗಳಿಗೆ ಅವಕಾಶ ಲಭಿಸುವದಿಲ್ಲ. ಜೂನಿಯರ್ ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಕ್ಲಸ್ಟರ್, ಹೋಬಳಿ, ತಾಲೂಕು ಮಟ್ಟದ ವಿವಿಧ ಕ್ರೀಡೆಗಳು ಇದೇ ಮೈದಾನವನ್ನು ಅವಲಂಭಿಸಿದೆ. ಇದರೊಂದಿಗೆ ಮೇಲಿನ ಮೈದಾನದಿಂದ ಧೂಳು ಟರ್ಫ್ ಮೇಲೆ ಬಿದ್ದು, ಬಹುಬೇಗನೇ ಹಾಳಾಗುತ್ತದೆ ಎಂಬದು ಇವರ ವಾದವಾಗಿದೆ.

ಇದನ್ನು ಮನಗಂಡ ಶಾಸಕ ರಂಜನ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸನಿಹವೇ ನೂತನ ಮೈದಾನವೊಂದನ್ನು ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಿದ್ದು, ಅದರಂತೆ ಮೈದಾನ ನಿರ್ಮಾಣವಾಗಿದ್ದರೂ ಇದುವರೆಗೂ ಇಲ್ಲಿ ಯಾವದೇ ಕ್ರೀಡಾಕೂಟಗಳು ಮಾತ್ರ ನಡೆದಿಲ್ಲ. ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಿಸಲು ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಪ್ರಥಮ ಹಂತವಾಗಿ ಜಿಲ್ಲಾಧಿಕಾರಿಗಳ ಖಾತೆಗೆ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡು ಇದರಲ್ಲಿ 75 ಲಕ್ಷ ವೆಚ್ಚ ಮಾಡಿ ಮೈದಾನದ ಒಂದು ಬದಿಯಲ್ಲಿ ಬೃಹತ್ ತಡೆಗೋಡೆ ನಿರ್ಮಿಸಲಾಗಿದೆ. ತಡೆಗೋಡೆ ನಿರ್ಮಿಸಿ 2 ವರ್ಷ ಕಳೆದರೂ ಸಹ ಇತರ ಕಾಮಗಾರಿ ಮಾತ್ರ ಪ್ರಾರಂಭಗೊಂಡಿಲ್ಲ.

ಈ ಮಧ್ಯೆ ಇಲ್ಲಿನ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ದಿ. ವಿಠಲಾಚಾರ್ಯ ಹಾಕಿ ಕಪ್ ಪಂದ್ಯಾವಳಿಯ ಫೈನಲ್ ಪಂದ್ಯಾಟದ ಉದ್ಘಾಟನೆಗೆ ಕಳೆದ ಜನವರಿ 8ರಂದು ಸೋಮವಾರಪೇಟೆಗೆ ಆಗಮಿಸಿದ್ದ ರಾಜ್ಯ ಸರ್ಕಾರದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಈ ಬಗ್ಗೆ ಗಮನ ಸೆಳೆದ ಸಂದರ್ಭ, ಮುಂದಿನ 15 ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಭರವಸೆ ನೀಡಿದ್ದರು. ಆ ಭರವಸೆಗೂ 9 ತಿಂಗಳು ಕಳೆದಿದ್ದು, ಕಾಮಗಾರಿ ಪ್ರಾರಂಭವಾದ ಬಗ್ಗೆ ಯಾವದೇ ಕುರುಹು ಕಂಡುಬರುತ್ತಿಲ್ಲ.