ಗೋಣಿಕೊಪ್ಪ, ಅ. 5: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಅಧಿಕವಾಗಿದ್ದು, ಅರಣ್ಯ ಇಲಾಖೆ ಕೊಡಗಿನ ಕಾಫಿ ತೋಟದಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕೆಲಸವನ್ನು ಮಾಡುತ್ತಿಲ್ಲ. ಆನೆ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ.
ಆನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೋಬಳಿ ಮಟ್ಟದಿಂದ ಜನಾಂದೋಲ ನವನ್ನು ಮಾಡುವದರ ಮೂಲಕ ಬೃಹತ್ ಪ್ರತಿಭಟನೆಯೊಂದಿಗೆ ವಿಧಾನ ಸಭೆಗೆ ಮುತ್ತಿಗೆ ಹಾಕಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುವ ಅಗತ್ಯವಿದೆ ಎಂದು ಹೊಸೂರು ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹೊಸೂರು ಗ್ರಾ.ಪಂ. ಗ್ರಾಮ ಸಭೆಯಲ್ಲಿ ಮೇ.ಜ. ಬಾಚಮಂಡ ಕಾರ್ಯಪ್ಪ ಕಾಡಾನೆ ಹಾವಳಿಯ ಬಗ್ಗೆ ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸುತ್ತಾ, ಹೊಸೂರು-ಅಮ್ಮತ್ತಿ ಭಾಗದಲ್ಲಿ ಕಾಡಾನೆಗಳ ಹಾವಳಿ ಅಧಿಕವಾಗಿದ್ದು, ಬೆಳಗಿನ ಜಾವದಲ್ಲೇ ಕಾಫಿ ತೋಟಗಳಲ್ಲಿ ಕಂಡುಬರುತ್ತಿದೆ. ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳನ್ನು ಓಡಿಸುವ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಸರಿಯಾಗಿ ಮಾಡುತ್ತಿಲ್ಲ. ಒಂದು ತೋಟದಿಂದÀ ಮತ್ತೊಂದು ತೋಟಕ್ಕೆ ಆನೆಗಳನ್ನು ಓಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆನೆ ಹಾವಳಿಯಿಂದ ಬೆಳೆಗಳು ನಾಶವಾಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಪ್ರತಿಯೊಂದು ಬೆಳೆಗೆ ಇಂತಿಷ್ಟು ಪರಿಹಾರ ನಿಗದಿಮಾಡಿದೆ. ಆದರೆ, ಇದುವರೆಗೆ ಯಾವದೇ ಪರಿಹಾರವನ್ನು ನೀಡಿಲ್ಲ. ಮುಂದಿನ ದಿನಗಳಲ್ಲಿ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ರೈತರಿಗೆ ನೀಡುವಂತಾಗ ಬೇಕು ಎಂದು ಆಗ್ರಹಿಸಿದರು.
ಹೊಸೂರು-ಅಮ್ಮತ್ತಿ ಭಾಗದಲ್ಲಿ ವಿದ್ಯುತ್ ತಂತಿ ಕೆಳಮಟ್ಟದಲ್ಲಿ ಹಾದುಹೋಗಿದ್ದು, ಅದನ್ನು ಉನ್ನತೀಕರಿಸಲು ಅನುಮತಿ ದೊರೆತಿದ್ದು, ಮಳೆಗಾಲ ಕಳೆದ ಮೇಲೆ ಸರಿಪಡಿಸಲಾಗುವದು. ಕುಡಿಯುವ ನೀರಿಗೆ ಕೊರೆದಿರುವ ಬೋರ್ವೆಲ್ ಗಳಿಗೆ ಸಂಪರ್ಕ ಕಲ್ಪಿಸಲಾಗುವದು ಎಂದು ಚೆಸ್ಕಾಂ ಅಧಿಕಾರಿ ಕೃಷ್ಣಕುಮಾರ್ ತಿಳಿಸಿದರು.
ಗೋಪಿ ಚಿಣ್ಣಪ್ಪ ಮಾತನಾಡಿ, ಪ್ರಧಾನ ಮಂತ್ರಿ ಗ್ರಾಮ ಸಡಖ್ ಯೋಜನೆಯಲ್ಲಿ ನಿರ್ಮಿಸಲಾಗಿರುವ ರಸ್ತೆ ನಿರ್ವಹಣೆಯನ್ನು ಮಾಡಲು ಸಂಬಂಧಪಟ್ಟ ಇಲಾಖೆಗೆ ಪತ್ರ ವ್ಯವಹಾರ ನಡೆಸಲಾಗಿದೆ. ಇದ ರೊಂದಿಗೆ ಕಳತ್ಮಾಡು-ಹೊಸಕೋಟೆಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಜಿ.ಪಂ. ವತಿಯಿಂದ ಒತ್ತಡ ಹಾಕಬೇಕು. ಗ್ರಾ.ಪಂ. ವತಿಯಿಂದ ಪತ್ರ ವ್ಯವಹಾರ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಲಾಗುವದು. ಹೊಸೂರು ಗ್ರಾ.ಪಂ. ವ್ಯಾಪ್ತಿಯ ಹಸಿ ಮೀನು ಮಳಿಗೆಯನ್ನು ಕಡಿಮೆ ದರದಲ್ಲಿ ಹರಾಜು ಮಾಡಲಾಗಿದೆ. ಆದರೆ, ಮೀನು ವ್ಯಾಪಾರಿಗಳು ಒಂದೊಂದು ಗ್ರಾಮಕ್ಕೆ ಒಂದೊಂದು ದರವನ್ನು ನಿಗದಿ ಪಡಿಸುತ್ತಿರುವದು ತಿಳಿದಿದ್ದು, ಈ ಬಗ್ಗೆ ಕ್ರಮ ಜರಗಿಸಲಾಗುವದು.
ಹೊಸೂರು ಗ್ರಾ.ಪಂ. ಅತೀ ಹೆಚ್ಚು ಬಿಪಿಎಲ್ ಕಾರ್ಡ್ದಾರರನ್ನು ಹೊಂದಿದೆ. ಇವರೆಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕು. ಕಂದಾಯ ಇಲಾಖೆ ಅನಾವಶ್ಯಕ ಗೊಂದಲಗಳನ್ನು ಮಾಡದೆ ಸರಳೀಕರಣದ ಮುಖಾಂತರ ದಾಖಲೆಗಳನ್ನು ನೀಡಬೇಕು. ಪೊಲೀಸ್ ಇಲಾಖೆ ಮತ್ತಷ್ಟು ಜವಾಬ್ದಾರಿ ಯುತವಾಗಿ ಕೆಲಸ ಮಾಡಬೇಕಾಗಿದೆ. ಸರ್ಕಾರಗಳ ವಿವಿಧ ಯೋಜನೆಗಳನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೆ ತಲುಪಿಸು ವಂತ ನಿಟ್ಟಿನಲ್ಲಿ ಪ್ರತಿ ಇಲಾಖೆಯ ಅಧಿಕರಿಗಳು ಸ್ಪಂದಿಸಬೇಕಾಗಿದೆ ಎಂದು ತಿಳಿಸಿದರು.
ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಹ್ಮಣಿ ಮಾತನಾಡಿ, ಜನಸಾಮಾನ್ಯರಿಂದ ಸರ್ಕಾರವಾಗಿದ್ದು, ಇದರ ಪ್ರತಿರೂಪ ಅಧಿಕಾರಿ ವರ್ಗ. ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕು. ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆ ಯನ್ನು ಪರಿಹರಿಸುವ ನಿಟ್ಟಿನಲ್ಲಿ ವಾರದ ಒಂದು ದಿನ ಜನಸ್ಪಂದನ ಕೆಲಸವನ್ನು ಮಾಡಲಾಗುವದು. ಗ್ರಾ.ಪಂ. ಅಭಿವೃದ್ಧಿಗೆ ಹಂತ ಹಂತವಾಗಿ ಅನು ದಾನವನ್ನು ಬಿಡುಗಡೆ ಮಾಡಲಾಗು ವದು ಎಂದು ತಿಳಿಸಿದರು.
ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಮಾತನಾಡಿ, ಪ್ರಸ್ತುತ ಸರ್ಕಾರದಿಂದ ಅನುದಾನ ಕುಂಠಿತ ವಾಗಿದೆ. ಸಿಗುವಂತಹ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಗ್ರಾಮಸ್ಥರು ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಬಳಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ನೋಡಲ್ ಅಧಿಕಾರಿ ಪ್ರಿಯ, ಗ್ರಾ.ಪಂ. ಉಪಾಧ್ಯಕ್ಷೆ ವಿಶಾಲಾಕ್ಷಿ ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.