ಗೋಣಿಕೊಪ್ಪಲು, ಅ. 5: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗೋದಾಮುಗಳಲ್ಲಿ ಕೊಡಗಿನ ಕಾಳುಮೆಣಸಿನೊಂದಿಗೆ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ ಬೆಳೆಗಾರರಿಗೆ ನ್ಯಾಯ ಒದಗಿಸಲು ವಿಳಂಬವಾಗು ತ್ತಿರುವದನ್ನು ಖಂಡಿಸಿ ತಾ. 10 ರಂದು ಗೋಣಿಕೊಪ್ಪದಿಂದ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್ ಜಾಥಾ ನಡೆಸಲಾಗುವದು ಎಂದು ರೈತ ಸಂಘ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.ಪ್ರಕರಣ ಸಂಬಂಧ ಇನ್ನೂ ಯಾವದೇ ನ್ಯಾಯ ರೈತರಿಗೆ ಲಭಿಸಿಲ್ಲ. ಯಾವದೇ ಒಂದು ತನಿಖಾಧಿಕಾರಿ ಯನ್ನು ನೇಮಿಸಿಲ್ಲ. ಕೂಡಲೇ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಟ್ರ್ಯಾಕ್ಟರ್ ಜಾಥಾ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವದು ಎಂದು ರೈತ ಸಂಘ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ತಿಳಿಸಿದರು.
ಅಂದು ಬೆಳಗ್ಗೆ 10.30 ಕ್ಕೆ ಗೋಣಿಕೊಪ್ಪ ಆರ್‍ಎಂಸಿ ಆವರಣದಿಂದ ಸುಮರು 25 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮೂಲಕ ರೈತರು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಸಂದರ್ಭ ಮತ್ತಷ್ಟು ರೈತರು ಪಾಲ್ಗೊಂಡು ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ನಡೆಸಲಿದ್ದಾರೆ ಎಂದರು.
ಈ ವಿಷಯದಲ್ಲಿ ರೈತರಿಗೆ ನ್ಯಾಯ ದೊರಕಿಸುವ ಹೋರಾಟ ನಿರಂತರ ವಾಗಿ ನಡೆಸಲಿದ್ದೇವೆ. ಆರೋಪಿಗಳ ಪರವಾನಗಿಯನ್ನು ರದ್ದು ಪಡಿಸಬೇಕು ಹಾಗೂ ರೈತರಿಗೆ ಆಗಿರುವ ಅನ್ಯಾಯ, ಮೋಸವನ್ನು ನಿರ್ನಾಮ ಮಾಡಬೇಕಿದೆ. ಕಾಫಿ ಬೆಳೆಯಿಂದ ನಷ್ಟ ಅನುಭವಿಸುತ್ತಿರುವ ಬೆಳೆಗಾರರು ಕಾಳುಮೆಣಸು ಕೃಷಿಯಿಂದ ನಷ್ಟ ಸರಿ ದೂಗಿಸಿಕೊಳ್ಳುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
(ಮೊದಲ ಪುಟದಿಂದ) ಇದರಿಂದ ಕಾರ್ಮಿಕರಿಗೆ ಕೂಲಿ ಹಾಗೂ ಕೊಡಗಿನ ವ್ಯಾಪರ ವಹಿವಾಟು ಕೂಡ ಕಾಳು ಮೆಣಸಿನಿಂದ ನಡೆಯುತ್ತಿದೆ. ಇದನ್ನು ಅರಿತು ಕಲೆಬೆರಕೆಯಿಂದ ತಪ್ಪಿಸಲು ಈ ಪ್ರಕರಣದಲ್ಲಿ ಉತ್ತಮ ತನಿಖಾಧಿಕಾರಿಗಳನ್ನು ನೇಮಿಸಬೇಕು. ಈ ಹಿಂದೆ ಕಾಳು ಮೆಣಸು ಕಳ್ಳತನ ಪ್ರಕರಣದಲ್ಲಿ ಉತ್ತಮ ತನಿಖೆ ನಡೆಸಿದ ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ. ರಾಜು ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದರೆ ಇನ್ನಷ್ಟು ಉತ್ತಮ ಎಂದರು.
ಗೋಷ್ಠಿಯಲ್ಲಿ ರೈತ ಸಂಘದ ಪ್ರಮುಖರುಗಳಾದ ಅಜ್ಜಮಾಡ ಚೆಂಗಪ್ಪ, ಅಯ್ಯಮಾಡ ಹ್ಯಾರಿ ಸೊಮೇಶ್ ಹಾಗೂ ಬಾಚಮಾಡ ಭವಿಕುಮಾರ್ ಉಪಸ್ಥಿತರಿದ್ದರು.