ಶ್ರೀಮಂಗಲ, ಅ. 7: ಗೋಣಿಕೊಪ್ಪ ಎಪಿಎಂಸಿಯಲ್ಲಿ ಕರಿಮೆಣಸು ಆಮದು ಹಾಗೂ ಇತರ ಅವ್ಯವಹಾರದ ಬಗ್ಗೆ ಕೊಡಗು ಬೆಳೆಗಾರರ ಒಕ್ಕೂಟ ಭಷ್ಟಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಎಪಿಎಂಸಿಯ ನಾಮನಿರ್ದೇಶಕ ಸದಸ್ಯರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಕಡೇಮಾಡ ಕುಸುಮಾ ಜೋಯಪ್ಪ ಹಾಗೂ ಮಾಳೇಟಿರ ಬೋಪಣ್ಣ ಅವರನ್ನು ಮಡಿಕೇರಿಗೆ ಕರೆಸಿಕೊಂಡಿರುವ ಎಸಿಬಿ ತನಿಖಾ ತಂಡ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಮೂಲಕ ತನಿಖೆ ಆರಂಭಿಸಿದೆ. ಗೋಣಿಕೊಪ್ಪ ಎಪಿಎಂಸಿಯ ಈ ಮೂವರು ಸದಸ್ಯರು ಎಪಿಎಂಸಿ ಒಳಗೆ ವಿಯೆಟ್ನಾಂನ ಕರಿಮೆಣಸು ಆಮದು ಮಾಡಿಕೊಂಡು ಕೊಡಗಿನ ಕರಿಮೆಣಸಿನೊಂದಿಗೆ ಕಲಬೆರಕೆ ಮಾಡಿ ಸ್ಥಳೀಯ ಬೆಳೆಗಾರರಿಗೆ ಅನ್ಯಾಯ ಹಾಗೂ ತೀವ್ರ ಬೆಲೆ ಕುಸಿತಕ್ಕೆ ಕಾರಣವಾಗಿರುವ ಬಗ್ಗೆ ಬೆಳಕಿಗೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ವಿಚಾರಣೆ ಮಾಡಲಾಗಿದೆ.
ಗೋಣಿಕೊಪ್ಪ ಎಪಿಎಂಸಿಯಲ್ಲಿ ವಿಯೆಟ್ನಾಂ ದೇಶದ ಕಳಪೆ ಕರಿಮೆಣಸನ್ನು ಕಡಿಮೆ ದರಕ್ಕೆ ಆಮದು ಮಾಡಿಕೊಂಡು ಕೊಡಗಿನ ಕರಿಮೆಣಸಿನೊಂದಿಗೆ ಕಲಬೆರಕೆ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ಕರಿಮೆಣಸು ದರ ಕುಸಿತಕ್ಕೆ ಕಾರಣವಾಗಿರುವ ಹಾಗೂ ಈ ಮೂಲಕ ಬೆಳೆಗಾರರಿಗೆ ಅನ್ಯಾಯವಾಗಿರುವ ಪ್ರಕರಣವನ್ನು ಕೂಡಲೇ ಇಲಾಖಾ ವತಿಯಿಂದ ತನಿಖೆ ನಡೆಸಲು ಕೃಷಿ ಹಾಗೂ ತೋಟಗಾರಿಕಾ ಮಾರಾಟ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಆದೇಶಿಸಿದ್ದಾರೆ.
ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರ ಮೂಲಕ ಕೊಡಗು ಬೆಳೆಗಾರರ ಒಕ್ಕೂಟದ ನಿಯೋಗ ಸಚಿವರನ್ನು ಭೇಟಿ ಮಾಡಿ ಈ ಪ್ರಕರಣದ ಬಗ್ಗೆ ಚರ್ಚಿಸಿ ಬೆಳೆಗಾರರಿಗೆ ನ್ಯಾಯ ಒದಗಿಸಲು ಹಾಗೂ ಈ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಸಲು ಮನವಿ ಮಾಡಿದ ಸಂದರ್ಭ ಸಚಿವರು ಈ ವಿಚಾರವನ್ನು ನಿಯೋಗಕ್ಕೆ ತಿಳಿಸಿದರು.
ಈಗಾಗಲೇ ಕೃಷಿ ಇಲಾಖೆಯ ಕಾನೂನು ಜಾರಿ ಕೋಶದ ಜಂಟಿ ನಿರ್ದೇಶಕರಾದ ಸತೀಶ್ ಕುಮಾರ್ ಅವರನ್ನು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿಯಲ್ಲಿ ಎಪಿಎಂಸಿ ವ್ಯವಹಾರದಲ್ಲಿ ದುರುಪಯೋಗ, ಅವ್ಯವಹಾರದ ಬಗ್ಗೆ ದೃಢಪಟ್ಟರೆ ತಕ್ಷಣವೇ ಕಾನೂನು ಕ್ರಮಕೈಗೊಳ್ಳಲಾಗುವದೆಂದು ನಿಯೋಗಕ್ಕೆ ಭರವಸೆ ನೀಡಿದರು.
ಕೇಂದ್ರ ಸರ್ಕಾರದ ಆಮದು ನೀತಿಯಿಂದ ಕರಿಮೆಣಸು ಆಮದಾಗುತ್ತಿದೆ. ಈಗಾಗಲೇ ಅಡಿಕೆ ಸಹ ಆಮದಾಗುತ್ತಿದ್ದು, ಕಡಿಮೆ ದರಕ್ಕೆ ಆಮದು ಮಾಡಿಕೊಂಡ ಅಡಿಕೆ ಹಾಗೂ ಕರಿಮೆಣಸಿನಿಂದ ದೇಶಿಯ ಬೆಳೆಗಾರರಿಗೆ ದರಕುಸಿತದಿಂದ ತೀವ್ರ ಸಂಕಷ್ಟ ಉಂಟಾಗಿದೆ.
(ಮೊದಲ ಪುಟದಿಂದ) ಈ ಬಗ್ಗೆ ಕೇಂದ್ರ ಸರ್ಕಾರವೇ ಆಮದು ತಡೆಗಟ್ಟಿ ದೇಶಿಯ ಬೆಳೆಗಾರರನ್ನು ಕಾಪಾಡಲು ಅಧಿಕಾರವಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ತಿಳಿಸಿದರು.
ಇದಲ್ಲದೆ, ಅಡಿಕೆ ಹಾಗೂ ಕರಿಮೆಣಸು ಎಪಿಎಂಸಿ ವ್ಯಾಪ್ತಿಯಲ್ಲಿರುವದರಿಂದ ಸ್ಥಳೀಯ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗುತ್ತಿಲ್ಲ. ಆದ್ದರಿಂದ ಇವೆರಡು ಬೆಳೆಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರ ತರುವಂತೆ ಬೆಳೆಗಾರರ ನಿಯೋಗ ಸಚಿವರಿಗೆ ಮನವರಿಕೆ ಮಾಡಿತು. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ಈ ಸಂದರ್ಭ ಕೃಷಿ ಮಾರಾಟ ಇಲಾಖೆಯ ಕಾನೂನು ಜಾರಿ ಕೋಶದ ಹೆಚ್ಚುವರಿ ನಿರ್ದೇಶಕ ಆರ್.ಎಸ್.ಚಾಮರಾಜ್ ಅವರನ್ನು ಸಹ ನಿಯೋಗ ಭೇಟಿ ಮಾಡಿ ಕರಿಮೆಣಸು ಆಮದಿನಿಂದ ಹಾಗೂ ಗೋಣಿಕೊಪ್ಪ ಎಪಿಎಂಸಿಯಲ್ಲಿ ಆಗಿರುವ ಅವ್ಯವಹಾರ ಹಾಗೂ ದುರುಪಯೋಗದ ಬಗ್ಗೆ ವಿವರ ಸಲ್ಲಿಸಿ ಚರ್ಚಿಸಿತು. ನಿಯೋಗದಲ್ಲಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬೀಲಿರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಹಾಜರಿದ್ದರು.