ಗೋಣಿಕೊಪ್ಪಲು,ಅ.6: ದಲಿತ ಕಾರ್ಮಿಕ ಮಂಜುನಾಥ್‍ರ ಪುತ್ರಿಯ ಹಸೆಮಣೆ ಶಾಸ್ತ್ರ ನಡೆಸಲು ಮಹಿಳಾ ಸಮಾಜ ಸಭಾಂಗಣವನ್ನು ರೂ.650 ಬಾಡಿಗೆ ಹೊಂದಿಕೊಂಡು ತಾನು ನೀಡಿದ್ದೆ. ಹಲವು ವರ್ಷಗಳಿಂದ ಬಡ ಮಧ್ಯಮ, ದುರ್ಬಲ ವರ್ಗದವರಿಗೆ ರಿಯಾಯಿತಿ ದರದಲ್ಲಿ ಕಾರ್ಯಕ್ರಮಕ್ಕೆ ಮಹಿಳಾ ಸಮಾಜವನ್ನು ನೀಡುತ್ತಾ ಬಂದಿದ್ದು, ಇತ್ತೀಚೆಗೆ ಮಂಜುನಾಥ್ ಅವರಲ್ಲಿ ರೂ.2,500 ಬಾಡಿಗೆಗೆ ಒತ್ತಾಯಿಸಿ ವಿವಾಹ ಕಾರ್ಯಕ್ರಮ ನಡೆಯಲು ಕಾರ್ಯದರ್ಶಿ ಬೋಜಮ್ಮ ಹಾಗೂ ಅಧ್ಯಕ್ಷೆ ಉತ್ತರೆ ಬಿಡದಿರುವ ಬಗ್ಗೆ ಕಾನೂನು ಕ್ರಮ ಜರುಗಿಸ ಲಾಗುವದು ಎಂದು ಚೇಂದಂಡ ಸುಮಿ ಸುಬ್ಬಯ್ಯ ತಿಳಿಸಿದ್ದಾರೆ.

ತಾನು ಊರಿನಲ್ಲಿಲ್ಲದ ಸಂದರ್ಭ ಇಂತಹ ಪ್ರಕರಣ ನಡೆದಿದೆ; ಮಹಿಳಾ ಸಮಾಜದಿಂದ ವಿವಾಹಕ್ಕೆ ಬಂದಿದ್ದ ಕುಟುಂಬವರ್ಗವನ್ನು ಹೊರದಬ್ಬಿ ಬೀಗಜಡಿದಿರುವ ಪ್ರಕರಣ ನಿಜಕ್ಕೂ ಅಕ್ಷಮ್ಯ. ಮಹಿಳಾ ಸಮಾಜ ಇತಿಹಾಸ ದಲ್ಲಿಯೇ ಇಂತಹಾ ಅಮಾನವೀಯ ಕೃತ್ಯ ನಡೆದಿರಲಿಲ್ಲ ಎಂದು ಸುಮಿ ಸುಬ್ಬಯ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾನು ಸುಮಾರು 5 ವರ್ಷಗಳಿಂದ ಗೋಣಿಕೊಪ್ಪಲು ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಬೋಜಮ್ಮ ಕಾರ್ಯದರ್ಶಿಯಾಗಿ ಹಾಗೂ ರೀನಾ ರಾಜೀವ್ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಸಮಾಜದ ಹಣಕಾಸಿನ ವಿಚಾರವಾಗಿ ಯಾವದೇ ಅವ್ಯವಹಾರ ನಡೆದಿರುವದಿಲ್ಲ. ಖಜಾಂಚಿ ಹಾಗೂ ಕಾರ್ಯದರ್ಶಿ ಇನ್ನೂ ಲೆಕ್ಕಪತ್ರ ನೀಡಿರುವದಿಲ್ಲ. ಸಮಾಜದ ವಿಜಯಾ ಬ್ಯಾಂಕ್ ಹಾಗೂ ಗೋಣಿಕೊಪ್ಪಲು ಜಿಆರ್‍ಸಿ ಬ್ಯಾಂಕ್ ಖಾತೆಯಲ್ಲಿ ಇದೀಗ ಸುಮಾರು ರೂ.60 ಸಾವಿರ ಉಳಿತಾಯ ಮೊತ್ತ ಇದೆ. ಕಾರ್ಯದರ್ಶಿ ಬೋಜಮ್ಮ ಅವರು ಇತ್ತೀಚೆಗೆ ಸಂಘದ ಕಾನೂನನ್ನು ಗಾಳಿಗೆ ತೂರಿ ತಾವೇ 8-10 ಮಂದಿಯನ್ನು ಸೇರಿಸಿ ನೂತನ ಆಡಳಿತ ಮಂಡಳಿ ಎಂದು ಹೇಳಿಕೊಂಡು ಸಭೆ ನಡೆಸಲು ಮುಂದಾಗಿರುವದು ತನಗೆ ತಿಳಿದುಬಂದಿದೆ. ಸಮಾಜದಲ್ಲಿ 340 ಕ್ಕೂ ಅಧಿಕ ಸದಸ್ಯರಿದ್ದು ಸೆ. 19 ರಂದು ಕರೆಯಲಾದ ಮಹಾಸಭೆಗೆ ಕೇವಲ 53 ಮಂದಿ ಸದಸ್ಯರು ಹಾಜರಾಗಿದ್ದು ಕೋರಂ ಕೊರತೆಯಿಂದಾಗಿ ರದ್ದಾಗಿರುತ್ತದೆ ಎಂದು ವಿವರಿಸಿದ್ದಾರೆ.

ಕಾರ್ಯದರ್ಶಿ ಬೋಜಮ್ಮ ಅವರು ಎಲ್ಲ ಸದಸ್ಯರಿಗೆ ಕನಿಷ್ಟ 7 ದಿನ ಮುಂಚಿತವಾಗಿ ಮಹಾಸಭೆಯ ಆಮಂತ್ರಣ ನೀಡಬೇಕಿದ್ದು, ಕಾನೂನನ್ನು ಗಾಳಿಗೆ ತೂರಿದ್ದಾರೆ. ತಮಗೆ ಬೇಕಾದವರಿಗೆ ದೂರವಾಣಿ ಕರೆ ಮಾಡಿ ಮಹಾಸಭೆಯನ್ನು ಕರೆದಿದ್ದು, ಮಹಾಸಭೆಯ ಬೈಲಾ ಹಾಗೂ ದಾಖಲಾತಿಗಳನ್ನು ವಾರ್ಷಿಕ ಮಹಾಸಭೆಗೆ ಹಾಜರುಪಡಿಸದೆ ತಪ್ಪೆಸಗಿದ್ದಾರೆ.

ಆಡಳಿತ ಮಂಡಳಿ ಸಭೆಯ ನಡಾವಳಿ ಪುಸ್ತಕಕ್ಕೆ ಅಧ್ಯಕ್ಷರ ಸಹಿಯನ್ನೇ ಪಡೆಯದಿರುವದು, ಕಾರ್ಯದರ್ಶಿಗಳು ತಮಗೆ ಅನುಕೂಲವಾಗುವಂತೆ ಪಟ್ಟಿ ಮಾಡಿ ಸದಸ್ಯರ ವಿರೋಧದ ನಡುವೆಯೂ ಆಡಳಿತ ಮಂಡಳಿ ರಚನೆ ಮಾಡಿ ಮೀಟಿಂಗು ನಡೆಸುತ್ತಿರುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತಿರುವದಾಗಿಯೂ ವಿಶೇಷ ಮಹಾಸಭೆ ಕರೆದು ಶೀಘ್ರವೇ ನೂತನ ಆಡಳಿತ ಮಂಡಳಿ ರಚನೆ ಮಾಡುವದಾಗಿಯೂ ಹಾಲಿ ಅಧ್ಯಕ್ಷೆ ಸುಮಿ ಸುಬ್ಬಯ್ಯ ತಿಳಿಸಿದ್ದಾರೆ.