ಮಡಿಕೇರಿ, ಅ. 7: ಐ.ಪಿ.ಎಲ್. ನಂತೆ ಕರ್ನಾಟಕ ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಜನಪ್ರಿಯತೆ ಪಡೆದಿರುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆ.ಪಿ.ಎಲ್.) ಪಂದ್ಯಾವಳಿ ಇತ್ತೀಚೆಗೆ ಮುಕ್ತಾಯಗೊಂಡಿದೆ. ಪ್ರಸಕ್ತ ವರ್ಷದ ಪ್ರಶಸ್ತಿಯನ್ನು ಬೆಳಗಾವಿ ಪ್ಯಾಂಥರ್ಸ್ ತಂಡ ತನ್ನದಾಗಿಸಿ ಕೊಂಡಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ 6 ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಒಬ್ಬರು ಭ್ರಷ್ಟಾಚಾರ ನಿಗ್ರಹದ ಮುಖ್ಯಸ್ಥರಾಗಿ ಹಾಗೂ ಇನ್ನೋರ್ವ ಯುವಕ ತಂಡವೊಂದರ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಕಿ ಕ್ರೀಡೆಯಲ್ಲಿ ಕೊಡಗಿನವರ ಸಾಧನೆ ಹೆಚ್ಚು. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‍ನಲ್ಲೂ ಮುಂದೆ ಬರುತ್ತಿರುವದು ಕ್ರೀಡಾಜಿಲ್ಲೆ ಖ್ಯಾತಿಯ ಕೊಡಗಿಗೆ ಮತ್ತೊಂದು ಹಿರಿಮೆಯಾಗಿದೆ.
ಐ.ಪಿ.ಎಲ್.ನಲ್ಲಿ ಈ ಬಾರಿಯ ವಿಜೇತ ತಂಡವಾದ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಅರಮೇರಿ ಕದನೂರಿನ ಕಂಡ್ರತಂಡ ಸುಬ್ಬಯ್ಯ ಅವರ ಪುತ್ರ ಕೆ.ಎಸ್. ದೇವಯ್ಯ, ಕಡಂಗ ಮರೂರಿನ ಬೊಳಕಾರಂಡ ಪೆಮ್ಮಯ್ಯ ಅವರ ಪುತ್ರ ದರ್ಶನ್ ಮಾಚಯ್ಯ, ಪ್ರತಿನಿಧಿಸಿದ್ದರು. ನಮ್ಮ ಶಿವಮೊಗ್ಗ ತಂಡದ ಪರ ವೀರಾಜಪೇಟೆಯ ಚೇಂದಂಡ ತಿಮ್ಮಯ್ಯ ಅವರ ಪುತ್ರ ಆದಿತ್ಯ ಸೋಮಣ್ಣ, ಬಿಜಾಪುರ ಬುಲ್ಸ್ ಪರ ಬಿಟ್ಟಂಗಾಲದ ಕೊಂಗಾಂಡ ಚರ್ಮಣ ಅವರ ಪುತ್ರ ಕೆ.ಸಿ. ಕಾರ್ಯಪ್ಪ, ಕೊಡಗಿನ ನಂಟು ಹೊಂದಿರುವ ರಾಜ್ಯ ರಣಜಿ ಆಟಗಾರ ಶ್ರೇಯಸ್ ಗೋಪಾಲ್, ಮೈಸೂರು ವಾರಿಯರ್ಸ್ ತಂಡದ ಪರ ಹಾಗೂ ನಮ್ಮ ಶಿವಮೊಗ್ಗ ಪರ ಕುಂಜಿಲಗೇರಿಯ ಕೂತಂಡ ಮಂದಣ್ಣ ಅವರ ಪುತ್ರ ಕೆ.ಎಂ. ಅಯ್ಯಪ್ಪ ಆಟವಾಡಿದ್ದಾರೆ. ಕೆ.ಎಸ್.ಸಿ.ಎ. ಪದಾಧಿಕಾರಿಯಾಗಿರುವ ಜಿಲ್ಲೆಯ ಮಾಚಿಮಂಡ ಕುಮಾರ್ ಅಪ್ಪಚ್ಚು ಭ್ರಷ್ಟಾಚಾರ ನಿಗ್ರಹದ ಮುಖ್ಯಸ್ಥರಾಗಿ ಹಾಗೂ ಮಕ್ಕಂದೂರಿನ ಕುಂಬುಗೌಡನ ರವಿ ಅವರ ಪುತ್ರ ಶ್ರವಣ್, ಮೈಸೂರು ವಾರಿಯರ್ಸ್ ತಂಡದ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. -ಶಶಿ.