ಶನಿವಾರಸಂತೆ, ಅ. 7: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಪಂಚಾಯಿತಿ ಮಾಸಿಕ ಸಭೆ ಪಂಚಾಯಿತಿ ಅಧ್ಯಕ್ಷ ಕೆ.ಜಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ಗ್ರಾಮದಲ್ಲಿ ಪಂಚಾಯಿತಿಯ ಗಮನಕ್ಕೆ ತರದೆ ಇತ್ತೀಚೆಗೆ ಮನೆಯೊಂದರಲ್ಲಿ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅನಾಥ ಮಕ್ಕಳ ಮತ್ತು ಮಹಿಳಾ ವಯೋವೃದ್ಧರ ಉಚಿತ ವಸತಿ ಆಶ್ರಮ ಉದ್ಘಾಟನೆ ಮಾಡಿರುವ ಬಗ್ಗೆ ಮಾಸಿಕ ಸಭೆಯಲ್ಲಿ ಚರ್ಚೆಯಾಗಿ, ಪಂಚಾಯಿತಿಯ ಯಾವದೇ ಅನುಮತಿ ಹಾಗೂ ತಿಳುವಳಿಕೆ ನೀಡದೆ ಸಾರ್ವಜನಿಕರ ಅರಿವಿಗೆ ಬಾರದೇ ಉದ್ಘಾಟಿಸಿದ್ದು, ಟ್ರಸ್ಟ್ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಯವರಿಗೆ ದೂರು ಸಲ್ಲಿಸುವಂತೆ ಸಭೆ ಸರ್ವಾನುಮತದಿಂದ ನಿರ್ಣಯಿಸ ಲಾಯಿತು. ಸ್ವಚ್ಛ ಭಾರತ್ ಮಿಶನ್ ಯೋಜನೆಯ ಖಾತೆಯಲ್ಲಿ ಉಳಿದಿರುವ ಹಣವನ್ನು ಜಿಲ್ಲಾ ಪಂಚಾಯಿತಿ ಖಾತೆಗೆ ವರ್ಗಾಯಿ ಸುವಂತೆ ಸಭೆ ನಿರ್ಣಯಿಸಿತು ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನರಹಿತರು ಇದ್ದು ನಿವೇಶನಕ್ಕಾಗಿ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸ ಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗವಿದ್ದು ಈ ಜಾಗವನ್ನು ನಿವೇಶನ ರಹಿತರಿಗೆ ಮಂಜೂರು ಮಾಡಿಸಿ ಕೊಡಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ತೀರ್ಮಾನಿಸಲಾಯಿತು. ಪಂಚಾಯಿತಿ ಸದಸ್ಯರುಗಳಾದ ಎನ್.ಕೆ. ಸುಮತಿ, ಮನುಹರೀಶ್, ಎಲ್.ಕೆ. ನೇತ್ರಾವತಿ. ಪಾರ್ವತಿ, ಕಮಲಮ್ಮ, ಬಿಂದಮ್ಮ, ಎ.ಆರ್. ರಕ್ಷಿತ್, ಎಂ.ಸಿ. ಹೂವಣ್ಣ, ಡಿ.ಎಲ್. ಯೋಗೇಂದ್ರ, ಎಂ.ಆರ್. ಸಂದೇಶ್, ಲೆಕ್ಕಾಧಿಕಾರಿ ದೇವರಾಜ್ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸ್ವಾಗತಿಸಿ, ಕಂಪ್ಯೂಟರ್ ನಿರ್ವಾಹಕಿ ಪೂರ್ಣಿಮ ವಂದಿಸಿದರು.