ಗೋಣಿಕೊಪ್ಪ, ಅ. 7: ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್‍ನ ಆಶ್ರಯದಲ್ಲಿ ದಸರಾ ಪ್ರಯುಕ್ತ ನಡೆದ ಟ್ರೆಷರ್ ಹಂಟ್‍ನ ಓಪನ್ ಕ್ಲಾಸ್‍ನ ಪ್ರಥಮ ಸ್ಥಾನವನ್ನು ಅಳಮೇಂಗಡ ಗ್ಲೇನ್ ಸೋಮಣ್ಣ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಗುಮ್ಮಟ್ಟಿರ ಕವಿನ್ ತಂಡ ಪಡೆದುಕೊಂಡಿತು. ವಿನೂತನವಾಗಿ ಆಯೋಜನೆ ಮಾಡಿದ್ದ ಟ್ರೆಷರ್ ಹಂಟ್ ಸ್ಪರ್ಧೆಯನ್ನು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಉದ್ಘಾಟಿಸಿದರು. ಸುಮಾರು 13 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಓಪನ್ ಕ್ಲಾಸ್ ವಿಭಾಗದ ದ್ವಿತೀಯ ಸ್ಥಾನವನ್ನು ಉದ್ದಪಂಡ ತಿಮ್ಮಣ್ಣ ತಂಡ, ತೃತೀಯ ಸ್ಥಾನವನ್ನು ಕೋಡಿರ ಸುಧೀರ್ ತಂಡ ಪಡೆದುಕೊಂಡರೆ, ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಅಳಮೇಂಗಡ ನಿಮ್ಮಿ ಮಂದಣ್ಣ ತಂಡ, ತೃತೀಯ ಸ್ಥಾನವನ್ನು ಕುಪ್ಪಂಡ ಕವನ್ ತಂಡ ಪಡೆದುಕೊಂಡಿತ್ತು.

ಸುಮಾರು 50 ರಿಂದ 55 ಕಿ.ಮೀ. ದೂರದ ಟ್ರಸರ್ ಹಂಟ್‍ನಲ್ಲಿ ಗ್ರಾಮೀಣ ಭಾಗದ ಪ್ರದೇಶಗಳನ್ನು ಆಯ್ಕೆ ಮಾಡಿಲಾಗಿತ್ತು. ಶ್ರೀ ಕಾವೇರಿ ದಸರಾ ವೇದಿಕೆಯಿಂದ ಪ್ರಾರಂಭವಾಗಿ ಕುಂದ, ಹಾತೂರು, ಕುಟ್ಟಂದಿ, ಬಿಟ್ಟಂಗಾಲ, ಚೊಕಂಡಳ್ಳಿ, ಹೊಸೂರು, ಪಾಲಿಬೆಟ್ಟ ಮುಖಾಂತರ ಅತ್ತೂರುವಿನಲ್ಲಿ ಈ ಸ್ಪರ್ಧೆಯನ್ನು ನಡೆಸಲಾಯಿತು. 4 ಕಡೆಗಳಲ್ಲಿ ಒಂದು ನಿಮಿಷಕ್ಕೆ ಒಳಪಟ್ಟು ಕೆಲವೊಂದು ಸ್ಪರ್ಧೆಗಳನ್ನು ಸಹ ನಡೆಸಲಾಯಿತು. ಕುಂದದಲ್ಲಿ ಸೂಜಿಗೆ ನೂಲು ಮತ್ತು ಬಕೆಟ್‍ಗೆ ಚೆಂಡನ್ನು ಹಾಕುವ ಸ್ಪರ್ಧೆ ನಡೆದರೆ ಕುಟ್ಟಂದಿ ಜಂಕ್ಷನ್‍ನಲ್ಲಿ ಬೆಲೋನ್ ಒಡೆಯುವದು, ಪಾಲಿಬೆಟ್ಟ ಎಸ್ಟೇಟ್ ರಸ್ತೆಯಲ್ಲಿ ಪೇಪರ್ ಬೊಟ್ ತಯಾರಿ ಮತ್ತು ಪೇಪರ್ ಕಪ್‍ಗಳ ಪಿರಮಿಡ್ ನಿರ್ಮಾಣ, ಜೆಡಿ ಟೆಂಪಲ್ ರಸ್ತೆಯಲ್ಲಿ ನೀರು ತುಂಬಿರುವ ಗ್ಲಾಸ್‍ನಿಂದ ಚೆಂಡುಗಳ ಆಯುವಿಕೆ ಮತ್ತು ಡೈಸ್ ನಂಬರ್ ಆಟ, ಅಂತಿಮವಾಗಿ ಅತ್ತೂರಿನಲ್ಲಿ ಕಣ್ಣು ಮುಚ್ಚಿ ಮಡಿಕೆ ಒಡೆಯುವ ಸ್ಪರ್ಧೆಯನ್ನು ನಡೆಸಲಾಯಿತು.

ವಿಜೇತರಿಗೆ ಬಹುಮಾನವನ್ನು ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಚೆಪ್ಪುಡಿರ ಮಾಚಯ್ಯ ಟ್ರೆಷರ್ ಹಂಟ್ ಸ್ಪರ್ಧೆಯ ನಕ್ಷೆ ತಯಾರಿ ಮಾಡಿದ ಹಾಗೂ ಈ ಸ್ಪರ್ಧೆಯ ಯೋಜನಾ ನಿರ್ದೇಶಕ ಪೂದ್ರಿಮಾಡ ನೀಲ್, ಕಾರ್ಯದರ್ಶಿ ಮೂಕೋವಂಡ ನವೀನ್, ಖಜಾಂಚಿ ಕುಲ್ಲಚಂಡ ಚಿಣ್ಣಪ್ಪ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು ಹಾಜರಿದ್ದರು.