ಮಡಿಕೇರಿ, ಅ. 7: ಅಂತೂ... ಇಂತೂ... ದಸರಾ ಮುಗಿದಿದೆ. ಸಾಕಷ್ಟು ಗೊಂದಲ, ಆತಂಕಗಳ ನಡುವೆ ತೆರೆ ಕಂಡಿರುವ ಮಡಿಕೇರಿ ಜನೋತ್ಸವ ಮೇಲ್ನೋಟಕ್ಕೆ ಶಾಂತ ರೀತಿಯಿಂದ ಮುಕ್ತಾಯಗೊಂಡರೂ, ಪರಸ್ಪರ ಪೈಪೋಟಿ, ಅಪನಂಬಿಕೆ, ಅಸಹಕಾರ, ರಾಜಕೀಯ ಪ್ರವೇಶ ಎಲ್ಲವೂ ಪ್ರತಿ ವರ್ಷದಂತೆ ಈ ಬಾರಿಯೂ ಸೇರಿಕೊಂಡಿದ್ದು ವಾಸ್ತವ... ಜವಾಬ್ದಾರಿಯುತರು ಇದನ್ನು ಅರ್ಥೈಸಿಕೊಂಡು ಮುಂದಿನ ದಿನಗಳ ದಸರಾ ನಾಡಹಬ್ಬಕ್ಕೆ ಬೈಲಾ ರಚನೆಯೊಂದಿಗೆ ನೀತಿ ನಿಯಮ ರೂಪಿಸಲು ತಕ್ಷಣದಿಂದಲೇ ಮುಂದಾಗಬೇಕೆನ್ನುವದು ಜನತೆಯ ಆಶಯ.

ಸಾರ್ವಜನಿಕ ಹಣದೊಂದಿಗೆ ಸರಕಾರದ ಅನುದಾನದಿಂದ ಆಚರಿಸಲ್ಪಡುವ ಜನೋತ್ಸವ ಪಾರದರ್ಶಕವಿದ್ದರೆ ಅದು ಸರಕಾರ ಮತ್ತು ದಾನಿಗಳನ್ನು ಗೌರವಿಸಿದಂತೆ. ಇನ್ನು ಶಕ್ತಿ ದೇವತೆಯ ಆರಾಧನೆ ಮೂಲಕ ನಮ್ಮ ಅಸುರೀತನವನ್ನು ತೊಡೆದುಕೊಂಡು ಸಮಾಜದ ಒಳಿತಿನೆಡೆಗೆ ದುಡಿಯಲು ಸಂಕಲ್ಪಿಸುವದಾಗಿದೆ.

ಇಂತಹ ಸದುದ್ದೇಶದ ಕೆಲಸಕ್ಕೆ ಯಾವದೇ ಮತ, ಧರ್ಮಗಳು, ಜಾತಿ, ಭಾಷೆ, ರಾಜಕಾರಣ ತೊಡಕಾಗದು. ಆ ದಿಸೆಯಲ್ಲಿ ಮಡಿಕೇರಿ ನಗರಸಭೆಯ ಜನಪ್ರತಿನಿಧಿಗಳ ಸಹಿತ ಸಾರ್ವಜನಿಕ ಕ್ಷೇತ್ರ ಹಾಗೂ ದೇವಾಲಯಗಳನ್ನು ಪ್ರತಿನಿಧಿಸುವ ಪ್ರಮುಖರನ್ನು ಒಳಗೊಂಡಿರುವ ದಸರಾ ಸಮಿತಿ ಮುಂದೆ ಸಭೆಯನ್ನು ಏರ್ಪಡಿಸಬೇಕಿದೆ.

ಕೊಡಗು ಜಿಲ್ಲೆಯ ಆಡಳಿತ, ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಸಭೆ ನಡೆಸಿ, ಇದುವರೆಗಿನ ಲೆಕ್ಕಪತ್ರ, ಖರ್ಚು ವೆಚ್ಚ, ಸಾಧಕ ಬಾಧಕಗಳ ವಿವರವಿರುವ ಸಮಗ್ರ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಬೇಕಿದೆ. ಭವಿಷ್ಯದಲ್ಲಿ ಆರೋಗ್ಯಪೂರ್ಣ ವ್ಯವಸ್ಥೆಯಡಿ ದಸರಾ ಆಚರಣೆಗೆ ಮುನ್ನುಡಿ ಬರೆಯಬೇಕಿದೆ.

ಇದಕ್ಕೆ ಕಾರಣಗಳು ಸ್ಪಷ್ಟ. ಶತಮಾನಗಳಿಂದ ಮಡಿಕೇರಿಯ ಒಂದಿಷ್ಟು ಹಿರಿಯರು ರಾಜಮಹಾರಾಜರ ಕಾಲದಿಂದಲೂ ನಡೆದು ಬಂದಿರುವ ಜನೋತ್ಸವವನ್ನು ಜನತೆಯ ಬಳಿಗೆ ಕೊಂಡೊಯ್ಯುವಲ್ಲಿ ಸಾಕಷ್ಟು ಶ್ರಮವಹಿಸಿ, ಕೇವಲ ದಾನಿಗಳಿಂದ ಕ್ರೋಢೀಕರಿಸಿದ ಹಣದಿಂದ ಉತ್ಸವ ನಡೆಸಿಕೊಂಡು ಬರುತ್ತಿದ್ದರು. ಆ ಹಣದ ಲೆಕ್ಕಪತ್ರ ಮಂಡಿಸಿ ಸಭೆಯ ಒಪ್ಪಿಗೆಯಂತೆ ಒಂದು ಸೀಮಿತ ವ್ಯವಸ್ಥೆಯಲ್ಲಿ ಕಾರ್ಯೋನ್ಮುಖರಾಗುತ್ತಿದ್ದರು.

ಈಗ ವ್ಯವಸ್ಥೆ ಬದಲಾಗಿ, ರಾಜ್ಯ ಸರಕಾರದಿಂದ ಕೆಲವು ವರ್ಷ ಹಿಂದೆ ರೂ. 10 ಲಕ್ಷದಿಂದ ಮುಂದುವರಿದು ರೂ. 75 ಲಕ್ಷದವರೆಗೆ ಅನುದಾನ ಲಭಿಸತೊಡಗಿತ್ತು. ಆ ಮಾತ್ರಕ್ಕೆ ದಾನಿಗಳ ನೆರವು ಕೂಡ ಹೆಚ್ಚುತ್ತಲೇ ಬಂದಿದೆ. ದಸರಾ ಸಮಿತಿ ಎಷ್ಟೇ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೂ, ಅದು ‘ನುಂಗಣ್ಣರ ಸಮಿತಿ’ ಎಂಬ ಅಪವಾದ ಹಲವು ವರ್ಷಗಳಿಂದ ಜನರಿಂದ ಕೇಳಲ್ಪಟ್ಟಿದೆ. ಅದನ್ನು ಹೋಗಲಾಡಿಸಬೇಕಾದರೆ, ದಸರಾ ಮುಗಿದ ಎರಡು ತಿಂಗಳೊಳಗೆ ಲೆಕ್ಕಪತ್ರ ಮಂಡಿಸುವ ವ್ಯವಸ್ಥೆ ಆಗಬೇಕಿದೆ.

ದಸರಾ ಯಶಸ್ಸಿಗೆ ಶ್ರಮಿಸುವವರು ಒಂದೆಡೆಯಾದರೆ, ವೇದಿಕೆಯನ್ನು ಬಳಸಿಕೊಂಡು ಬೇರೆಯವರಿಗೆ ತಲೆನೋವು ತಂದಿಡುವವರು ಇಲ್ಲದಿಲ್ಲ.

ಈ ಬಾರಿಯ ದಸರಾ ಗಮನಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣೆ ನಡೆದಿದೆ. ಪಕ್ಷಗಳ ನಡುವಿನ ಪೈಪೋಟಿ ಹೋಗಿ ವ್ಯಕ್ತಿಗಳ ನಡುವಿನ ಪೈಪೋಟಿ ನಡೆದಿದೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹೊಡೆದಾಟ ಮಾತ್ರ ಬಾಕಿ ಇತ್ತು. ದಸರಾ ಸಭೆಯನ್ನು ನಿಯಂತ್ರಿಸುವವರು ಯಾರು? ಆಯ್ಕೆ ಮಾಡುವ ಅಧಿಕಾರ ಹೊಂದಿರುವವರು ಯಾರು? ಚುನಾವಣೆ ನಡೆಸುವವರು ಯಾರು?

5 ಲಕ್ಷ ವ್ಯವಹಾರ ಮಾಡುವ ಸಂಘಗಳಿಗೆ ಸರಕಾರದ ನಿಯಮವಿದೆ. ಆದರೆ ಸುಮಾರು 1 ಕೋಟಿ ವ್ಯವಹಾರದ, ಅದೂ ಸರಕಾರದ ಅನುದಾನ ಬಳಸುವ ದಸರಾಕ್ಕೆ ಇಂದಿನ ವ್ಯವಸ್ಥೆಯ ಬೈಲಾ ಇಲ್ಲ. ಸಭೆಯಲ್ಲಿ ಗುಂಪು ಮಾಡಿಕೊಂಡು ಬಂದರೆ ಸಾಕು, ಎಲ್ಲ ಸ್ಥಾನಗಳೂ ಅವರುಗಳಿಗೇ ಲಭ್ಯ! ಇದೆಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಸರಾ ಸಮಿತಿ ಇದೆ ಗಮನಿಸಿ.

ಇನ್ನು ಹೊಂದಾಣಿಕೆ ಇಲ್ಲದ ಸಾಂಸ್ಕøತಿಕ ಸಮಿತಿ ಮತ್ತು ದಸರಾ ಸಮಿತಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬಹಿರಂಗವಾಗಿ ಮಾಧ್ಯಮಗಳ ಮೂಲಕ ಮಾಡಿಕೊಂಡಿರುವದು ಇಬ್ಬರಿಗೂ ಶೋಭೆಯಲ್ಲ. ಸ್ಥಳೀಯ ಕಲಾವಿದರನ್ನು ಅವಮಾನಿಸಿದ ‘ಕೀರ್ತಿ’ಗೆ ಎರಡು ಸಮಿತಿಗಳೂ ಭಾಜನವಾಗುತ್ತವೆ. ಕಾರ್ಯಕ್ರಮ ರೂಪಿಸುವದಕ್ಕೆ ಮೊದಲೇ ಇಬ್ಬರೂ ಒಂದೆಡೆ ಕುಳಿತು ಚರ್ಚಿಸಿದ್ದರೆ ಈ ರೀತಿ ಆಗುತ್ತಿತ್ತೆ?

ಸಾಂಸ್ಕøತಿಕ ಸಮಿತಿ ಕಾರ್ಯಕ್ರಮಗಳ ಬಗ್ಗೆ ಹಲವು ಜನ ಚರ್ಚಿಸಿದ್ದಾರೆ. ಮಹಿಳಾ ದಸರಾ, ಮಕ್ಕಳ ದಸರಾ, ಜಾನಪದ ವೈಭವಗಳನ್ನು ಪ್ರದರ್ಶಿಸಿರುವ ಹೆಗ್ಗಳಿಕೆಯ ನಡುವೆಯೇ ಭಾರತದ ಮೂಲ ಸಂಸ್ಕøತಿ, ಪರಂಪರೆ, ಸಂಗೀತ, ನೃತ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಿರುವ ನೋವಿನಲ್ಲೂ ಕಲಾವಿದರೂ, ಕಲಾಭಿಮಾನಿಗಳು ಮಾತನಾಡುತ್ತಿದ್ದಾರೆ. ಹಿಂದೆ ದಸರಾ ಕಾರ್ಯಕ್ರಮಗಳಲ್ಲಿ ಮೊದಲಿಗೆ ಭಾರತೀಯ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಭರತನಾಟ್ಯ, ಭಕ್ತಿಗೀತೆ, ಕೊಳಲು, ಸ್ಯಾಕ್ಸೋಫೋನ್... ನಂತರ ವಾದ್ಯಗಳ ಸಂಗೀತ ಪ್ರದರ್ಶನವಿರುತ್ತಿತ್ತು. ಆದರೆ ಅದೆಲ್ಲವೂ ಮಾಯವಾಗಿ ಇದೀಗ ಹಿಂದಿ, ತಮಿಳು ಚಿತ್ರಗೀತೆಗಳಿಗೆ ನರ್ತಿಸುವವರಿಂದ ಆರಂಭಗೊಳ್ಳುತ್ತಿದೆ. ಈ ಬಾರಿಯ ಪ್ರಥಮ ದಿನದ ಪ್ರಥಮ ಕಾರ್ಯಕ್ರಮದಲ್ಲಿ ಯಾವದೇ ಸರಿಯಾದ ವಸ್ತ್ರ ವ್ಯವಸ್ಥೆ ಇಲ್ಲದೆ ಕುಣಿದ ಹುಡುಗಿಯರ ನೃತ್ಯ... ‘ನನ್ನನ್ನು ಮದುವೆ ಆಗುವದಿಲ್ಲವೇ’ ಎಂಬದು! ಇದೇ ಆರಂಭಿಕ ನೃತ್ಯದ ಕೊನೆಯ ನೃತ್ಯ ವಾಲಗ! ಈ ಬಗ್ಗೆ ಕನಿಷ್ಟ ತಯಾರಿಯಾದರೂ ಸಮಿತಿಗೆ ಬೇಡವಾಗಿತ್ತೇ ಎಂಬದು ಪ್ರೇಕ್ಷಕರ ಪ್ರಶ್ನೆಯಾಗಿತ್ತು. ಜೊತೆಗೆ ಸಮಯ ಕಾಯ್ದುಕೊಳ್ಳದ ವ್ಯವಸ್ಥೆ, ಯಾವಾಗ ಆರಂಭ, ಯಾವಾಗ ಅಂತ್ಯ ಎನ್ನುವದು ಸಮಿತಿಗಾಗಲೀ, ಕಲಾವಿದರಿಗಾಗಲೀ, ಪ್ರೇಕ್ಷಕರಿಗಾಗಲೀ ಒಂಭತ್ತು ದಿನಗಳೂ ಅರಿವಿಗೆ ಬಾರದಿರುವ ವ್ಯವಸ್ಥೆ ಕಂಡು ಬಂದಿತು.

ಕೆಲವು ಕಲಾವಿದರು ಎರಡೆರಡೂ ದಿನಗಳೂ ವೇದಿಕೆಯಲ್ಲಿ ಕಾರ್ಯಕ್ರಮ ಕೊಟ್ಟಿದ್ದನ್ನೂ ಜನ ಗಮನಿಸಿದ್ದಾರೆ. ವಿಜಯ ದಶಮಿಯ ಹಿಂದಿನ ರಾತ್ರಿ 9 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದು ಆ ನಂತರ ಲಕ್ಷಾಂತರ ರೂಪಾಯಿ ಕೊಟ್ಟು ಕರೆಸಿದ ಸಂಗೀತ ರಸಸಂಜೆ ತಂಡಗಳಿಗೆ ವೇದಿಕೆ ಬಿಟ್ಟು ಕೊಡಲಾಗುತ್ತಿತ್ತು. ಆದರೆ ಈ ಬಾರಿ ಆರ್ಕೆಸ್ಟ್ರಾ ತಂಡ ಕಾರ್ಯಕ್ರಮ ಆರಂಭಿಸಿದ್ದು ಮಧ್ಯರಾತ್ರಿ 1 ಗಂಟೆಗೆ ರಸಸಂಜೆಗೆಂದು ಬಂದಿದ್ದವರಿಗೆ ನಿರಾಶೆಯಾಗದೆ ಇರಲಿಲ್ಲ. ಕನ್ನಡ ಸಂಸ್ಕøತಿ ಇಲಾಖೆ ಅನುದಾನ ನೀಡುವದು ಭಾರತೀಯ ಸಂಸ್ಕøತಿಯನ್ನು ಬೆಳೆಸಲು ಮತ್ತು ಪೋಷಿಸಲು ಹೊರತು ಸಿಡಿ ಹಾಕಿ ಹಿಂದಿ, ತಮಿಳು, ತೆಲುಗು, ಇಂಗ್ಲೀಷ್ ಹಾಡುಗಳಿಗೆ ಕುಣಿಯುವದಕ್ಕೆ ಅಲ್ಲವೆಂದು ಸಮಿತಿಯವರು ಅರ್ಥ ಮಾಡಿಕೊಳ್ಳಬೇಕು.

ಈ ವ್ಯವಸ್ಥೆಯಿಂದಾಗಿ ಈ ಬಾರಿ ಜಿಲ್ಲೆಯ ಹೆಚ್ಚಿನ ಭರತನಾಟ್ಯ ಸಂಸ್ಥೆಯವರು ಅರ್ಜಿ ಹಾಕಿಲ್ಲವೆನ್ನುವದನ್ನು ನೈಜ ಕಲಾಭಿಮಾನಿಗಳು ನೊಂದುಕೊಂಡಿದ್ದಾರೆ. ನ್ಯೂನತೆಗಳ ನಡುವೆಯೂ ಹೊಸತನ್ನು ಪರಿಚಯಿಸಿದ ಹೆಮ್ಮೆ ದಸರಾ ಸಾಂಸ್ಕøತಿಕ ಸಮಿತಿಗೆ ಇದೆ. ಮಹಿಳಾ ದಸರಾ, ಮಕ್ಕಳ ದಸರಾ, ದಸರಾ ಹಬ್ಬದ ಅವಿಭಾಜ್ಯ ಅಂಗವಾಗಿ ಹೋಗುವಷ್ಟು ಪ್ರಸಿದ್ಧವಾಗಿದ್ದು, ಅದರ ಕೀರ್ತಿ ಇದೇ ಸಮಿತಿಗೆ ಇದೆ.

ಯುವ ದಸರಾ ಸಮಿತಿಗೆ 4-5 ದಿನಗಳ ಕಾಲಾವಕಾಶ ಮಾತ್ರ ನೀಡುತ್ತಿರುವದು ಯುವ ಪಡೆಯ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಅದೂ ಕೂಡ ಯಶಸ್ವೀ ಕಾರ್ಯಕ್ರಮ ಆಗಿರುವದರಿಂದ ದಸರಾ ಸಮಿತಿ ಹೆಚ್ಚೂ ಕಾಲಾವಕಾಶ ನೀಡಬೇಕಿದೆ. ಪ್ರತ್ಯೇಕ ಯುವ ದಸರಾ ಸಮಿತಿಯನ್ನು ರಚಿಸಬೇಕಿದೆ.

ಕ್ರೀಡೆ ಹಾಗೂ ಕವಿಗೋಷ್ಠಿಗಳಲ್ಲಿ ನೈಜ ಪ್ರತಿಭೆಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ ದೊರಕುತ್ತಿರುವದು ಸಂತೋಷ. ಕ್ರೀಡೆಯಲ್ಲಿ ವಿಜೇತರಾದವರಿಗೆ ಚೀನಾ ತಯಾರಿತ ಬಹುಮಾನ ನೀಡಲಾಗಿದೆ ಎಂಬ ಬಗ್ಗೆ ಹಲವರು ಅಸಮಾಧಾನಗೊಂಡಿದ್ದಾರೆ. ಆದರೆ ಇದು ಉದ್ದೇಶಪೂರ್ವಕವಾಗಿರದೆ, ಸಮಯದ ಅಭಾವದ ಕಾರಣವೂ ಸೇರಿಕೊಂಡಿದೆ. ಹಾಗಾಗಿ ಮುಂದೆ ಗಮನ ಅಗತ್ಯವಿದೆ.

ಇನ್ನು ದಶಮಂಟಪಗಳ ಪ್ರದರ್ಶನ, ಡಿಜೆ ನಿಷೇಧ ಎನ್ನುವದು ಬರೀ ಹೇಳಿಕೆಗಳಿಗೆ ಸೀಮಿತವಾಗಿ, ಮಾರ್ಗದಲ್ಲಿ ಮೆರೆದಿದ್ದು, ದೇವಾನುದೇವತೆಗಳ ಪ್ರದರ್ಶನವಲ್ಲ ಬದಲಿಗೆ ಡಿಜೆ ಕುಣಿತ, ಜೊತೆಗೆ ಸಮಯಕ್ಕೆ ಸರಿಯಾಗಿ ಪ್ರದರ್ಶನ ನೀಡದಿರುವದು ಕೆಲವು ಕೇವಲ 1 ಪ್ರದರ್ಶನ ನೀಡಿದ್ದು, ಒಟ್ಟು ‘ಹಣ ನೀರಿಗೆ ಹೋಮ’ ಎಂಬಂತಾಗುತ್ತಿರುವ ಬಗ್ಗೆ ಜನ ನೊಂದುಕೊಂಡಿದ್ದಾರೆ.

ಹಣಕಾಸಿನ ತೊಂದರೆ ಬಗ್ಗೆ ಈ ಬಾರಿಯ ದಸರಾ ಸಮಿತಿ ಜಿಲ್ಲಾಧಿಕಾರಿಗಳೊಂದಿಗೆ ವರ್ತಿಸಿದ ರೀತಿ ಸರಿ ಅಲ್ಲ. ‘ನೀವು ಹಣಕಾಸು ನೆರವು ನೀಡದಿದ್ದಲ್ಲಿ ನಾವು ರಾಜೀನಾಮೆ ನೀಡುತ್ತೇವೆ’ ಎಂದು ಬೆದರಿಸಿರುವದು; ಅದಕ್ಕೆ ಜಿಲ್ಲಾಧಿಕಾರಿಗಳು ಸೊಪ್ಪು ಹಾಕದಿರುವದು, ನಗರದ ಪ್ರಥಮ ಪ್ರಜೆಯಾಗಿ ನಗರಸಭಾ ಅಧ್ಯಕ್ಷರೇ ಈ ರೀತಿ ವರ್ತಿಸಿರುವದು ಯಾರೂ ಒಪ್ಪತಕ್ಕದ್ದಲ್ಲ. ಜಿಲ್ಲಾಧಿಕಾರಿಗಳ ಎದುರಲ್ಲೇ ಕಾರ್ಯಾಧ್ಯಕ್ಷರು ಜಿಲ್ಲಾ ಉಸ್ತುವಾರಿ ಸಚಿವರನ್ನೂ ನಿಂದಿಸಿರುವದು ಕೂಡ ಪಕ್ವ ವರ್ತನೆ ಎಂದು ಯಾರೂ ಭಾವಿಸಿಲ್ಲ; ಆ ವಿಷಯವರಿತ ಉಸ್ತುವಾರಿ ಸಚಿವರು ದಸರಾ ಸಂದರ್ಭ ಜಿಲ್ಲೆಗೆ ಬಾರದಿರುವ ಬೆಳವಣಿಗೆಯೂ ನಡೆದಿದೆ.

ಸರಕಾರದ 50 ಲಕ್ಷ ಅನುದಾನದ ನಡುವೆಯೂ ಒಟ್ಟು ಅಂದಾಜು 75 ಲಕ್ಷ ಖರ್ಚಾಗಿದ್ದು, 10 ಲಕ್ಷದಷ್ಟು ‘ಸಾಲ’ ದಸರಾ ಸಮಿತಿ ಮೇಲಿದೆ. ಹಣಕಾಸು ಸರಿದೂಗಿಸಲು ಎಲ್ಲರಿಗೂ ‘ಕಡಿತ’ ಆರಂಭಗೊಂಡ ಬಗ್ಗೆ ಮಾಹಿತಿ ಬಂದಿದೆ. ಇದು ಸಮರ್ಪಕ ರೀತಿಯ ಯೋಜನೆ ನಿರ್ವಹಣೆಯಾಗಿಲ್ಲ ಎಂಬದಕ್ಕೆ ಉದಾಹರಣೆಯಾಗುತ್ತದೆ.

ಸಭೆ ಆಗಲಿಲ್ಲ: ಈ ಬಾರಿ ತಕ್ಷಣದಿಂದಲೇ ಸಭೆ ಕರೆಯಲು ಕಾರಣಗಳಿವೆ. ಎಲ್ಲಿಯೋ ಪ್ರಸಕ್ತ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ನಗರಸಭೆ, ನಾಡಿನ ಶಾಸಕರು, ಪೌರಾಡಳಿತ, ದೇವಾಲಯ ಸಮಿತಿಗಳು, ಸಾಂಸ್ಕøತಿಕ ಕಾರ್ಯಕ್ರಮಗಳ ನಡುವೆ ಕೊನೆ ದಿನಗಳಲ್ಲಿಯೂ ಮುಸುಕಿನ ಗುದ್ದಾಟವಿತ್ತು.

ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳು, ವ್ಯಾಪಕ ಪೊಲೀಸ್ ಬಂದೋಬಸ್ತ್ ನಡುವೆ ನಗರದ ಹೃದಯ ಭಾಗದಲ್ಲಿರುವ ದೇವಿ ದೇವಾಲಯ ಎದುರಲ್ಲೇ ಕೊಲೆಯೊಂದು ನಡೆದರೆ, ದಶಮಂಟಪ ಅಧ್ಯಕ್ಷ-ಕಾರ್ಯದರ್ಶಿ ಬೀದಿಯಲ್ಲಿ ಪೆಟ್ಟು ತಿಂದಿರುವದು ನಮ್ಮ ಜನರ ಅಸಹನೆಗೆ ಸಾಕ್ಷಿ.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದರೆ, ರಾಜ್ಯ ಆಹಾರ ಸಚಿವ ಯು.ಟಿ. ಖಾದರ್ ಮಾತಿನಂತೆ ನಾವು ಭಾರತೀಯ ಏಕತೆ, ಕೋಮು ಸಾಮರಸ್ಯ, ಪರಸ್ಪರ ಒಗ್ಗಟ್ಟು ಕಾಯ್ದುಕೊಳ್ಳುವ ಮನೋಧರ್ಮದಿಂದ ಜನೋತ್ಸವದಲ್ಲಿ ತೊಡಗಿಸಿಕೊಳ್ಳುತ್ತಿಲ್ಲವೇನೋ ಎಂಬ ಅನುಮಾನ ಮೂಡಿಸುವಂತಾಗಿದೆ.

ಹಿಂದಿನ ದಸರಾ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರೂ, ಸುದೀರ್ಘ ಅವಧಿಗೆ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದ ಜಿ. ಚಿದ್ವಿಲಾಸ್ ಅವರಿಗೆ ವಿಶೇಷ ಸಭೆಯಲ್ಲಿ ಬೈಲಾ ರಚನೆಗೆ ಅಧಿಕಾರ ನೀಡಲಾಗಿತ್ತು. ಈ ಬೈಲಾ ಕರಡು ಪ್ರತಿ ಮಂಡನೆಗಾಗಿ ಏರ್ಪಡಿಸಲಾಗಿದ್ದ ವಿಶೇಷ ಸಭೆಯಲ್ಲಿ ನಮ್ಮಲ್ಲಿ ಕೆಲವರು ನಡೆದುಕೊಂಡ ರೀತಿ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ನೋಡಿದವರಿಗೆ ಅಸಹ್ಯವೆನಿಸತೊಡಗಿತು.

ಈ ಕಾರಣಕ್ಕಾಗಿಯಾದರೂ ಸಾಕಷ್ಟು ಬೇಗನೆ ದಸರಾ ಸಮಿತಿ ಸಭೆ ಕರೆದು, ಬೈಲಾ ಕರಡು ಪ್ರತಿಯನ್ನು ಸಭೆಯಲ್ಲಿ ಮಂಡಿಸಿ, ಈ ಪ್ರತಿಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಿ ತೀರ್ಮಾನದೊಂದಿಗೆ ಮುನ್ನಡೆಯಬೇಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಪರಿಸ್ಥಿತಿ ಅಥವಾ ಬೆಲೆಗಳನ್ನು ಗಮನದಲ್ಲಿ ಇಟ್ಟುಕೊಂಡು, ವರ್ಷದಿಂದ ವರ್ಷಕ್ಕೆ ಕನಿಷ್ಟ ಮುಂದಿನ ಹತ್ತು ವರ್ಷ ಮಡಿಕೇರಿ ದಸರಾ ಆಚರಣೆಗೆ ತಗಲಬಹುದಾದ ವೆಚ್ಚ, ಆ ಬಗ್ಗೆ ಸರಕಾರದ ಗಮನ ಸೆಳೆಯುವದು ಸೇರಿದಂತೆ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಹೇಳುವಂತೆ, ‘ವಿಜಯದಶಮಿ ಹೆಸರಿನಲ್ಲಿ ಆಚರಿಸುವ ದಸರಾ ಮಂಟಪೋತ್ಸವ ದುರ್ಬಲ ಮನಸ್ಸುಗಳಿಗೆ ಸಮಾಜದಲ್ಲಿ ನೆಮ್ಮದಿಯ ಬದುಕು ಕಂಡುಕೊಳ್ಳಲು ಸ್ಫೂರ್ತಿಯಾಗಬೇಕೇ ಹೊರತು; ಅಂತಹವರು ಶಬ್ಧಮಾಲಿನ್ಯದಿಂದ ಎದೆಯೊಡೆದುಕೊಂಡು ಅಸುನೀಗಬಾರದು’ ಈ ಎಲ್ಲಾ ಸೂಕ್ಷ್ಮ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಭವಿಷ್ಯದ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮಕ್ಕೆ ಜವಾಬ್ದಾರಿಯುತರು ಇಂದಿನಿಂದಲೇ ಕಾರ್ಯೋನ್ಮುಖರಾದರೆ ದಸರಾ ವೇದಿಕೆಯಲ್ಲಿ ಅತಿಥಿಯೊಬ್ಬರು ಹೇಳಿದಂತೆ ‘ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಎನ್ನುವಷ್ಟರ ಮಟ್ಟಿಗಾದರೂ ಸುಧಾರಣೆಯೊಂದಿಗೆ ದಸರಾ ನಾಡ ಹಬ್ಬದಿಂದ ಯಾರಿಗೂ ಕೆಡುಕಾಗದಂತೆ ನಾವು ನಡೆದುಕೊಳ್ಳಬಹುದೇನೋ? ? ಚಿ.ನಾ. ಸೋಮೇಶ್