ಮಡಿಕೇರಿ, ಅ.7: ಮೂರ್ನಾಡಿನ ಕ್ಲೀನ್ ಕೂರ್ಗ್ ಸಂಸ್ಥೆ ವತಿಯಿಂದ ಮಡಿಕೇರಿಯ ರಾಜಾಸೀಟ್ ಮತ್ತು ಅಬ್ಬಿಫಾಲ್ಸ್ ಸ್ವಚ್ಚತಾ ಅಭಿಯಾನ ಜರುಗಿತು. ಉಭಯ ಪ್ರವಾಸಿತಾಣಗಳಲ್ಲಿ ಬಿಸಾಡಲ್ಪಟ್ಟಿದ್ದ ಮೂಟೆಗಟ್ಟಲೆ ತ್ಯಾಜ್ಯ, ಪ್ಲಾಸ್ಟಿಕ್ ಶೀಷೆಗಳನ್ನು ತೆರವುಗೊಳಿಸಲಾಯಿತು. ಮೂರ್ನಾಡಿನ ಕ್ಲೀನ್ ಕೂರ್ಗ್ ಸಂಸ್ಥೆ ವತಿಯಿಂದ ಆಯೋಜಿತ ಸ್ವಚ್ಚತಾ ಅಭಿಯಾನಕ್ಕೆ ಮಡಿಕೇರಿ ರಾಜಾಸೀಟ್‍ನಲ್ಲಿ ಚಾಲನೆ ದೊರಕಿತು. ಮಡಿಕೇರಿ ಲಯನ್ಸ್ ಕ್ಲಬ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿ ಛೇಂಬರ್ ಆಫ್ ಕಾಮರ್ಸ್, ಲಯನೆಸ್ ಕ್ಲಬ್‍ಗಳ ಸದಸ್ಯರು, ಸಂತ ಮೈಕಲರ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸ್ವಚ್ಛತಾ ಅಭಿಯಾನಕ್ಕೆ ಸಹಕಾರ ನೀಡಿದರು.
ಈ ಸಂದರ್ಭ ಮಾತನಾಡಿದ ಕ್ಲೀನ್ ಕೂರ್ಗ್ ಸಂಸ್ಥೆಯ ಮುಖ್ಯಸ್ಥ ಬಡುವಂಡ ಅರುಣ್ ಅಪ್ಪಚ್ಚು. ವಿಶ್ವದಲ್ಲಿಯೇ ಅಪೂರ್ವ ಪ್ರಕೃತಿ ಸೌಂದರ್ಯ ಹೊಂದಿರುವ ಕೊಡಗು ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಸಂರಕ್ಷಿಸುವದು ಈ ಜಿಲ್ಲೆಯ ಪ್ರತೀ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಸತ್ತ ನಂತರ ದೇಹ ಪರಿಶುದ್ದ ಮಣ್ಣಿನಲ್ಲಿ ಲೀನವಾಗಬೇಕೇ ವಿನಾ ತ್ಯಾಜ್ಯಗಳ ನಡುವೇ ಖಂಡಿತಾ ಅಲ್ಲ ಎಂಬದನ್ನು ಯಾರೂ ಮರೆಯಬಾರದು. ಹೀಗಾಗಿ ಸ್ವಚ್ಛ ಪರಿಸರಕ್ಕೆ ಎಲ್ಲರೂ ಗಂಭೀರವಾಗಿ ಗಮನ ಹರಿಸಬೇಕೆಂದು ಕರೆ ನೀಡಿದರು. ಕ್ಲೀನ್ ಕೂರ್ಗ್ ವತಿಯಿಂದ ಪ್ರತೀ ವರ್ಷ ಜಿಲ್ಲೆಯ ಹಲವೆಡೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಈ ಮೂಲಕ ಜನಜಾಗೃತಿ ಉಂಟು ಮಾಡಲಾಗುತ್ತಿದೆ ಎಂದೂ ಅರುಣ್ ಅಪ್ಪಚ್ಚು ತಿಳಿಸಿದರು.
ರಾಜಾಸೀಟ್ ಉದ್ಯಾನವನದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡ ಸಂದರ್ಭ ಉದ್ಯಾನವನದಲ್ಲಿಯೇ 10 ಮೂಟೆಗಳಷ್ಟು ತ್ಯಾಜ್ಯ, ಅದರಲ್ಲಿಯೂ ಪ್ಲಾಸ್ಟಿಕ್ ಶೀಷೆಗಳು ಸಂಗ್ರಹವಾದವು. ಉದ್ಯಾನವನದ ಅಲ್ಲಲ್ಲಿ ತ್ಯಾಜ್ಯವನ್ನು ಬಿಸಾಡಿದ್ದನ್ನು ಕಾರ್ಯಕರ್ತರು ತೆರವುಗೊಳಿಸಿದರು.
ನಂತರ 14 ಸೈಕಲ್‍ಗಳಲ್ಲಿ ಕ್ಲೀನ್ ಕೂರ್ಗ್ ಸಂಸ್ಥೆಯ ಸದಸ್ಯರು ಮಡಿಕೇರಿಯಿಂದ
(ಮೊದಲ ಪುಟದಿಂದ) ಸ್ವಚ್ಛತಾ ಅರಿವಿನ ಸಂದೇಶ ಸಾರುತ್ತಾ 8 ಕಿ.ಮೀ. ದೂರದ ಅಬ್ಬಿಫಾಲ್ಸ್‍ಗೆ ಸೈಕ್ಲಿಂಗ್ ನಡೆಸಿದರು. ದಾರಿಯುದ್ದಕ್ಕೂ ಅಲ್ಲಲ್ಲಿ ತ್ಯಾಜ್ಯ ತೆರವುಗೊಳಿಸಿದ ಕಾರ್ಯಕರ್ತರು. ಜಲಪಾತದ ವ್ಯಾಪ್ತಿಯಲ್ಲಿಯೂ ಸ್ವಚ್ಛತಾ ಕಾರ್ಯ ಕೈಗೊಂಡರು. ಈ ಸಂದರ್ಭವೂ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ, ಪ್ಲಾಸ್ಟಿಕ್ ಗಳು ಪತ್ತೆಯಾದವು. ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಈ ತ್ಯಾಜ್ಯವನ್ನು ತೆರವುಗೊಳಿಸಿದರು.
ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಬೊಳ್ಳಪ್ಪ, ಕಾರ್ಯದರ್ಶಿ ಮಧುಕರ್, ಲಯನೆಸ್ ಅಧ್ಯಕ್ಷೆ ಕವಿತಾ, ಕಾರ್ಯದರ್ಶಿ ಗೀತಾ ಮಧುಕರ್, ಮೋಹನ್‍ದಾಸ್, ಎಂ.ಎ. ನಿರಂಜನ್, ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಅನಿಲ್ ಹೆಚ್.ಟಿ., ನಿರ್ದೇಶಕರಾದ ದಿನೇಶ್ ಕಾರ್ಯಪ್ಪ, ಕಿರಣ್ ರೈ, ಎಂ.ಪಿ. ನಾಗರಾಜ್, ಕೆ.ಕೆ.ವಿಶ್ವನಾಥ್, ಮಧುಸೂದನ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಖಜಾಂಜಿ ಅಂಬೆಕಲ್ ನವೀನ್ ಕುಶಾಲಪ್ಪ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ನಿರ್ದೇಶಕ ಜಿ. ಚಿದ್ವಿಲಾಸ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಕಾರ್ಯದರ್ಶಿ ಎಂ.ಧನಂಜಯ್, ನಿರ್ದೇಶಕಿ ಮೋಂತಿ ಗಣೇಶ್, ಅರುಣ್ ಸ್ಟೋರ್ಸ್ ಮಾಲೀಕ ಅರುಣ್, ಅಮಿತ್, ಪಾಲ್ಗೊಂಡಿದ್ದರು.