ಕುಶಾಲನಗರ, ಅ. 7: ಅಭಿವೃದ್ಧಿಯ ನಾಗಾಲೋಟದ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳು ಕಣ್ಮರೆ ಯಾಗುತ್ತಿರುವದು ವಿಷಾದನೀಯ ಎಂದು ಕುಶಾಲನಗರ ಜೆಎಂಎಫ್‍ಸಿ ನ್ಯಾಯಾಧೀಶ ನಟರಾಜು ಹೇಳಿದರು.

ಅರಣ್ಯ ಇಲಾಖೆ ಕೊಡಗು ವೃತ್ತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ 63ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಜಾಗೃತಿ ಜಾಥಾದಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಅರಣ್ಯ ಪ್ರದೇಶಗಳ ಅತಿಕ್ರಮದಿಂದಾಗಿ ಪ್ರಾಣಿಗಳು ನೆಲೆಸಲು ಸ್ಥಳಾವಕಾಶದ ಕೊರತೆ ಉಂಟಾಗಿ ನಾಡಿಗೆ ಲಗ್ಗೆಯಿಡುತ್ತಿರುವ ಪರಿಸ್ಥಿತಿ ಉಂಟಾಗಿದೆ. ಕೃಷಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಪ್ರದೇಶಗಳ ಒತ್ತುವರಿಯಾ ಗುತ್ತಿರುವದನ್ನು ತಡೆಗಟ್ಟಬೇಕಿದೆ. ಒತ್ತುವರಿಗೊಂಡ ಅರಣ್ಯ ಪ್ರದೇಶವನ್ನು ತೆರವುಗೊಳಿಸುವಲ್ಲಿ ಸರಕಾರ ಚಿಂತನೆ ಹರಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಕೆ.ಆರ್.ರೇಣುಕಾ ಜಾಥಾಗೆ ಚಾಲನೆ ನೀಡಿದರು.

ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಎಂ.ಎಸ್. ಚಿಣ್ಣಪ್ಪ, ನೆಹರು, ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ವಲಯ ಅರಣ್ಯಾಧಿಕಾರಿ ಅರುಣ್, ಕರಾವಿಪ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್ ವಾಸ್, ಸಂಚಾಲಕ ಟಿ.ಜಿ. ಪ್ರೇಮ್‍ಕುಮಾರ್, ಉಪಾಧ್ಯಕ್ಷ ಮೊಯಿದ್ದೀನ್ ಇದ್ದರು.

ಸ್ಥಳೀಯ ಜಿಎಂಪಿ ಶಾಲಾ ಆವರಣದಲ್ಲಿ ಆರಂಭಗೊಂಡ ಜಾಥಾದಲ್ಲಿ ಸ್ಥಳೀಯ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಘೋಷಣೆಗಳ ನಾಮಫಲಕಗಳನ್ನು ಹಿಡಿದು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಈ ಸಂದರ್ಭ ಶಾಲಾ ಆವರಣದಲ್ಲಿ ಅತಿಥಿಗಳು ಗಿಡ ನೆಡುವ ಕಾರ್ಯಕ್ರಮ ನಡೆಯಿತು.