ಕುಶಾಲನಗರ, ಅ. 7: ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ವೈ.ಪ್ರಕಾಶ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಗುಡ್ಡೆಹೊಸೂರು ಸಮುದಾಯ ಭವನದಲ್ಲಿ ಸಿರಿಧಾನ್ಯಗಳ ಮಹತ್ವದ ಕುರಿತು ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾಲಬಾಧೆಯಿಂದ ಬಹುತೇಕ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಲವು ರೈತರು ತಮ್ಮ ದುಶ್ಚಟಗಳಿಗೆ ದುಂದುವೆಚ್ಚ ಮಾಡುತ್ತಿರುವದು ಕಂಡುಬಂದಿದೆ. ಇದು ಮಿತಿಮೀರಿದಾಗ ಸಾಲದ ಸಮಸ್ಯೆಗೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿಯತ್ತಿರುವದು ವಿಪರ್ಯಾಸ ಎಂದರು.ತಮ್ಮ ಆದಾಯವನ್ನು ದುಂದು ವೆಚ್ಚಗಳಿಗೆ ಬಳಕೆ ಮಾಡದೆ ಸಮರ್ಪಕ ಯೋಜನೆ ಮೂಲಕ ಕೃಷಿ ಚಟುವಟಿಕೆಗಳನ್ನು ಕೈಗೊಂಡಲ್ಲಿ ಲಾಭ ಗಳಿಸಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಟಗೇರಿಯ ಪ್ರಗತಿಪರ ರೈತ ಧನಪಾಲ್, ಇಂದಿನ ಯುವಪೀಳಿಗೆಗೆ ಕೃಷಿಯನ್ನು ಪರಿಚಯಿಸುವದು ಅತ್ಯಗತ್ಯವಾಗಿದೆ.

ರೈತರ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳುತ್ತಿರುವದು ಒಂದೆಡೆಯಾದರೆ ಮತ್ತೊಂದೆಡೆ ಕೃಷಿ ಭೂಮಿಗಳು ಬರಡಾಗುತ್ತಿದೆ. ಆದ್ದರಿಂದ ಯುವಕರನ್ನು ಕೃಷಿಯತ್ತ ಆಕರ್ಷಿಸುವದು ಅಗತ್ಯವಾಗಿದೆ ಎಂದರು.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯ ಪುಷ್ಪ ಜನಾರ್ಧನ್ ಮಾತನಾಡಿದರು.

ನಂತರ ನಡೆದ ವಿಚಾರಗೋಷ್ಠಿಯಲ್ಲಿ ಸಿರಿಧಾನ್ಯಗಳ ಮಹತ್ವದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಜಯಪ್ರಸಾದ್ ಬಳ್ಳಕೆರೆ, ಕೆ. ಪುಟ್ಟಸ್ವಾಮಿ ವಿಚಾರ ಮಂಡಿಸಿದರು.

ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗುರುಬಸಪ್ಪ, ಕೃಷಿ ಇಲಾಖೆಯ ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್, ತಾಲೂಕು ಕೃಷಿ ವಿಸ್ತರಣಾಧಿಕಾರಿ ಗೀತಾ, ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕ ಹರೀಶ್ ಇದ್ದರು.