ಮಡಿಕೇರಿ, ಅ. 7: ರಾಜ್ಯ ಸರ್ಕಾರ ಸಿ ಮತ್ತು ಡಿ ವರ್ಗದ ಜಮೀನಿನಲ್ಲಿ ನೆಲೆ ಕಂಡುಕೊಂಡವರಿಗೆ ಭೂ ಮಂಜೂರಾತಿ ಮಾಡಲು ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ತಹಸೀಲ್ದಾರರುಗಳು ಈ ಬಗ್ಗೆ ಒಂದು ವಾರದ ಒಳಗೆ ಕಾರ್ಯಪ್ರವೃತ್ತ ರಾಗದಿದ್ದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಗಮನ ಸೆಳೆಯುವದಾಗಿ ಭೂ ರಹಿತ ಕೃಷಿಕರ ಸಂಘಟನೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎ.ಟಿ. ಮಾದಪ್ಪ, 2011-12ನೇ ಸಾಲಿನಿಂದ ಕೊಡಗು ಜಿಲ್ಲೆಯ ಸಿ ಮತ್ತು ಡಿ ವರ್ಗದ ಜಮೀನಿನಲ್ಲಿ ವಾಸಿಸುತ್ತಿರುವವರ ಪರವಾಗಿ ನಮ್ಮ ಸಂಘಟನೆ ಹೋರಾಟ ನಡೆಸಿದ ಪರಿಣಾಮವಾಗಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಭೂ ಮಂಜೂರಾತಿಗೆ ಆದೇಶ ಹೊರಡಿಸಿದ್ದಾರೆ. ಈ ವಿಚಾರದಲ್ಲಿ ಸಲಹೆ ನೀಡಿದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ನ್ಯಾಯಾಲಯ ದಲ್ಲಿ ವಾದ ಮಂಡಿಸಿದ ಎ.ಕೆ. ಸುಬ್ಬಯ್ಯ ಅವರ ಪಾತ್ರ ಮತ್ತು ಕಾಗೋಡು ತಿಮ್ಮಪ್ಪ ಅವರ ಇಚ್ಛಾಶಕ್ತಿ ಪ್ರಮುಖವಾಗಿದೆ ಎಂದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಾಳಜಿ ತೋರಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವವರು ದಾಖಲಾತಿ ಒದಗಿಸುವಂತೆ ಸರ್ಕಾರದಿಂದ ಆದೇಶ ಹೊರಡಿಸಿದ್ದಾರೆ.

ಆದರೆ, ಕೆಲವು ಸಂಘಟನೆಗಳು ಸರ್ಕಾರದ ಸುತ್ತೋಲೆಯ ಲಾಭ ಪಡೆದು ತಮ್ಮಿಂದಲೆ ಎಲ್ಲಾ ಆಗಿದೆ ಯೆಂದು ಹೇಳಿಕೆ ನೀಡುತ್ತಿರುವದು ಖಂಡನೀಯ ವೆಂದು ಮಾದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಸಚಿವರ ಆದೇಶ ಇನ್ನೂ ಒಂದು ವಾರದ ಒಳಗೆ ಪಾಲನೆಯಾಗದಿದ್ದಲ್ಲಿ ಮತ್ತೆ ಸಚಿವರ ಗಮನ ಸೆಳೆÉದು ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ. ಕಂದಾಯ ಇಲಾಖೆಯಲ್ಲಿ ಯಾವದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ವೆಂದು ಎ.ಟಿ. ಮಾದಪ್ಪ ಇದೇ ಸಂದರ್ಭ ಆರೋಪಿಸಿದರು.

ಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಜಿ.ಎ. ಇಬ್ರಾಹಿಂ, ಕಾರ್ಯದರ್ಶಿ ದಿಲೀಪ್ ಕುಮಾರ್, ಉಪ ಕಾರ್ಯದರ್ಶಿ ಸಿ.ಎ. ತಮ್ಮಯ್ಯ ಹಾಗೂ ಸದಸ್ಯ ಎ.ಎಸ್. ದೇವಯ್ಯ ಉಪಸ್ಥಿತರಿದ್ದರು.