ಸೋಮವಾರಪೇಟೆ, ಅ. 7: ತಾಲೂಕಿನ ದೊಡಮಳ್ತೆ ಗ್ರಾಮ ಪಂಚಾಯಿತಿಯ ವಳಗುಂದ ಹಾಗೂ ಸಮೀಪದ ಹಾನಗಲ್ಲು ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯೋಜನೆಗೆ ಪ್ರಮುಖರುಗಳು ಚಾಲನೆ ನೀಡಿದರು.

ವಳಗುಂದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಚಾಲನೆ ನೀಡಿದರು. ಇದರೊಂದಿಗೆ ಆಯೋಜಿಸಲಾಗಿದ್ದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮ ದಿನಾಚರಣೆ ಅಂಗವಾಗಿ ಅಂಗನವಾಡಿ ಕೇಂದ್ರದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ದಿವಾಕರ್, ಸದಸ್ಯೆ ಸೋಮಕ್ಕ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ದೇವರಾಜ್, ಅಂಗನವಾಡಿ ಕಾರ್ಯಕರ್ತೆ ಫಲಿತ ರಮೇಶ್, ಆಶಾ, ಆರೋಗ್ಯ ಇಲಾಖೆಯ ಮಹೇಶ್, ಬಾಲವಿಕಾಸ ಸಿಬ್ಬಂದಿಗಳು ಹಾಜರಿದ್ದರು.

ಹಾನಗಲ್ಲು: ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಮಾತೃಪೂರ್ಣ ಕಾರ್ಯಕ್ರಮಕ್ಕೆ ತಾ.ಪಂ. ಸದಸ್ಯೆ ತಂಗಮ್ಮ ಅವರು ಚಾಲನೆ ನೀಡಿದರು. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಬಿಸಿಯೂಟ ನೀಡುವ ಮೂಲಕ ಚಾಲನೆ ನೀಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ್, ಅಂಗನವಾಡಿ ಕಾರ್ಯಕರ್ತೆ ಶಾರದ, ಆಶಾ ಕಾರ್ಯಕರ್ತೆ ಸೌಭಾಗ್ಯ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.