ಮೂರ್ನಾಡು, ಅ. 7: ಸ್ವಚ್ಛತೆ ಕುರಿತು ವಿದ್ಯಾರ್ಥಿಗಳು ಅರಿವು ಮೂಡಿಸಿಕೊಂಡು ಸ್ವಚ್ಛ ಗ್ರಾಮವನ್ನು ನಿರ್ಮಾಣ ಮಾಡಬೇಕು ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯೆ ತುಂತಜ್ಜೀರ ಕುಮುದ ರಶ್ಮಿ ಕರೆ ನೀಡಿದರು.
ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರ್ನಾಡು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಲಾದ ವಿಶೇಷ ವಾರ್ಷಿಕ ಶಿಬಿರದಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದು ತಿಳಿಸಿದರು.
ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಪಿ.ಪಿ. ಸುಕುಮಾರ್ ಮಾತನಾಡಿ, ಶಿಬಿರದಲ್ಲಿ ಕಲಿಯುವಂತಹ ವಿಷಯಗಳು ಜೀವನಕ್ಕೆ ಮಾರ್ಗದರ್ಶಕವಾಗಬೇಕು ಎಂದರು. ಉಡುಪಿ ಸಾಲಿಗ್ರಾಮ ಡಿವೈನ್ ಪಾರ್ಕ್‍ನ ಯಶವಂತ್ ದೇವರಗುಂಡ ‘ದುಶ್ಚಟಗಳು ಜೀವನಕ್ಕೆ ಮಾರಕ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಮೂರ್ನಾಡು ವಿದ್ಯಾಸಂಸ್ಥೆ ನಿರ್ದೇಶಕ ಈರಮಂಡ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಳುವಾರನ ಪಳಂಗಪ್ಪ, ಹಾಕತ್ತೂರು ವಿವೇಕ ಜಾಗೃತ ಬಳಗ ಸದಸ್ಯೆ ಅಮ್ಮಟಂಡ ವಾಣಿ ಬೆಳ್ಯಪ್ಪ, ಎನ್‍ಎಸ್‍ಎಸ್ ಯೋಜನಾಧಿಕಾರಿ ಯು.ಸಿ. ಮಾಲತಿ ಉಪಸ್ಥಿತರಿದ್ದರು.