ಶನಿವಾರಸಂತೆ, ಅ. 7: ಶನಿವಾರಸಂತೆ ಹೋಬಳಿಯ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ವತಿಯಿಂದ ಬೆಳೆಗಾರರೆಲ್ಲರೂ ಒಂದುಗೂಡಿ ಕಾಫಿ ತೋಟದಲ್ಲಿ ಶಂಕು ಹುಳಗಳ ನಾಶಕ್ಕಾಗಿ ಸ್ವಪ್ರೇರಣೆಯಿಂದ ದೇಣಿಗೆ ನೀಡುವ ಮೂಲಕ ‘ಹಿಡಿಕೊಲ್ಲು’ ಕಾರ್ಯಕ್ರಮಕ್ಕೆ ಈ ಹಿಂದೆಯೇ ಚಾಲನೆ ನೀಡಲಾಗಿತ್ತು. ‘ಶಕ್ತಿ’ ವರದಿಗೆ ಸ್ವಂದಿಸಿದ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಇತ್ತೀಚೆಗೆ ಗುಡುಗಳಲೆಯ ಕಲ್ಯಾಣ ಮಂಟಪದಲ್ಲಿ ಸಭೆ ಕರೆದು ಬೆಳೆಗಾರರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಗಳೊಂದಿಗೆ ಬಂದು ವೀಕ್ಷಣೆ ಮಾಡುವದಾಗಿ ತಿಳಿಸಿದ್ದರು. ಆದರೆ ಇಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಂಡ್ಲಿ ಗ್ರಾಮದ ಕಾಫಿ ತೋಟಗಳ ಬಳಿ ಕಾದರೂ ಜಿಲ್ಲಾಧಿಕಾರಿಗಳು ಬರಲಿಲ್ಲ.

ಕಾಫಿ ಮಂಡಳಿಯ ಸದಸ್ಯ ಅಭಿಮನ್ಯು ಕುಮಾರ್ ಹಾಗೂ ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್ ‘ಶಕ್ತಿ’ಯೊಂದಿಗೆ ಮಾತನಾಡುತ್ತಾ ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳಿ, ಹಂಡ್ಲಿ, ಕೆರಳ್ಳಿ ಹಾಗೂ ಹೆಬ್ಬುಲುಸೆ ಗ್ರಾಮಗಳಲ್ಲಿ ಸುಮಾರು 300 ಎಕರೆ ತೋಟಗಳಲ್ಲಿ ಶಂಕು ಹುಳಗಳನ್ನು (6.50 ಟನ್) ಸಂಗ್ರಹಿಸಿ ನಾಶ ಮಾಡಲಾಗಿದೆ. ವಾರದೊಳಗಡೆ ಕಾಫಿ ಬೋರ್ಡ್ ವತಿಯಿಂದ ಕಿಟ್, ಆರ್ಟಿಕಲ್ ಏಗ್ರಿಕಲ್ಚರ್ ವತಿಯಿಂದ ಅರಣ್ಯ ಇಲಾಖೆ ಹಾಗೂ ಶಾಸಕರ ಹಣವನ್ನು ಪಡೆದುಕೊಳ್ಳುವಂತೆ ನಿರ್ಧರಿಸಲಾಯಿತು. ಎರಡನೇ ಬಾರಿ ನಡೆದ ಚಾಲನೆಗೆ ಆರೋಗ್ಯ ಇಲಾಖೆ ವತಿಯಿಂದ ಕೈಗಳಿಗೆ ತೊಡುವ ಗ್ಲೌಸ್‍ಗಳನ್ನು ವಿತರಿಸಲಾಯಿತು.

ಎರಡನೇ ಹಂತದ ‘ಹಿಡಿಕೊಲ್ಲು’ ಸಾಂಕೇತಿಕ ಹೋರಾಟದಲ್ಲಿ ಬೆಳೆಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್, ಉಪಾಧ್ಯಕ್ಷರುಗಳಾದ ಎಸ್.ಸಿ. ಶರತ್ ಶೇಖರ್, ಹೆಚ್.ವಿ. ದಿವಾಕರ್, ನಿರ್ದೇಶಕರುಗಳಾದ ಪುಟ್ಟಸ್ವಾಮಿ, ಪವನ್, ಪ್ರತಾಪ್, ಶಿವಶೇಖರ್, ರವಿಕುಮಾರ್, ತಾ.ಪಂ. ಸದಸ್ಯ ಕುಶಾಲಪ್ಪ, ಕೆ.ವಿ. ಮಂಜುನಾಥ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್, ಕಾಫಿ ಮಂಡಳಿಯ ಹೆಚ್.ಆರ್. ಮುರುಳಿಧರ್, ಸರಕಾರಿ ಇಲಾಖೆ. ಕಾಫಿ ಬೆಳೆಗಾರರು ಉಪಸ್ಥಿತರಿದ್ದರು.