ಮಡಿಕೇರಿ, ಅ.6 : ರಾಜ್ಯ ಕಾಂಗ್ರೆಸ್ ಸರ್ಕಾರದ ನಾಲ್ಕೂವರೆ ವರ್ಷಗಳ ಸಾಧನೆಯನ್ನು ಮನೆ ಮನೆಗೆ ತಲುಪಿಸುವ “ಕಾಂಗ್ರೆಸ್ ನಡಿಗೆ ಮನೆ ಮನೆ ಕಡೆಗೆ” ಅಭಿಯಾನಕ್ಕೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಅ.7 ರಂದು ಚಾಲನೆ ನೀಡಲಾಗುವದೆಂದು ಅಭಿಯಾನದ ಉಸ್ತುವಾರಿ ವಹಿಸಿರುವ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಿದ್ದ 167 ಭರವಸೆಗಳಲ್ಲಿ ಈಗಾಗಲೆ 160 ಈಡೇರಿದೆ ಎಂದರು. ರಾಜ್ಯ ಸರ್ಕಾರದ ಯೋಜನೆಗಳು 5 ಕೋಟಿ ಜನರನ್ನು ತಲುಪಲು ಯಶಸ್ವಿಯಾಗಿದೆ. ಶನಿವಾರ ನಡೆಯುವ ಕಾಂಗ್ರೆಸ್ ನಡಿಗೆ ಮನೆ ಮನೆ ಕಡೆಗೆ ಅಭಿಯಾನದಲ್ಲಿ 500 ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮುತ್ತಪ್ಪ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸುಳ್ಳು ಭರವಸೆಗಳಲ್ಲೆ ಕಾಲಹರಣ ಮಾಡುತ್ತಿದ್ದು. ಎಲ್ಲಾ ಕ್ಷೇತ್ರಗಳಲ್ಲಿ ವೈಫಲ್ಯವನ್ನು ಕಂಡಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ನೋಟ್ ಅಮಾನ್ಯೀಕರಣ, ಆಧಾರ್ ಕಾರ್ಡ್ ವೈಫಲ್ಯ, ಕಪ್ಪು ಹಣದ ಬಗ್ಗೆ ನೀಡಿದ ಸುಳ್ಳು ಭರವಸೆ, ಬೆಲೆ ಏರಿಕೆ ಸೇರಿದಂತೆ ಎಲ್ಲಾ ವೈಫಲ್ಯಗಳ ಬಗ್ಗೆ ಮಾಹಿತಿ ಕೈಪಿಡಿಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮಾಡಲಿದೆ ಎಂದರು.

ಹತ್ತು ವರ್ಷಗಳ ಕಾಲ ಈ ದೇಶವನ್ನು ಆಳಿದ ಯುಪಿಎ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲಾಗದೆ ವಿಫಲತೆಯನ್ನು ಕಂಡ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಇಂದು ರಾಜ್ಯ ಸರ್ಕಾರದ ಸಾಧನೆÀಯನ್ನು ಜನರ ಬಳಿಗೆ ಕೊಂಡೊಯ್ಯುತ್ತಿದೆ ಎಂದು ನಾಪಂಡ ಮುತ್ತಪ್ಪ ಸ್ಪಷ್ಟಪಡಿಸಿದರು. ಸುಮಾರು 500 ಮಂದಿ ಕಾರ್ಯಕರ್ತರು ನಗರಸಭಾ ವ್ಯಾಪ್ತಿಯ 8 ಸಾವಿರ ಮನೆಗಳಿಗೆ ಒಂದೇ ದಿನ ಭೇಟಿಯಾಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್ ಮಾತನಾಡಿ, ಕಾಂಗ್ರೆಸ್ ನಡಿಗೆ ಮನೆ ಮನೆ ಕಡೆಗೆ ಅಭಿಯಾನಕ್ಕೆ ತಾ.7 ರಂದು (ಇಂದು) ಬೆಳಗ್ಗೆ 10 ಗಂಟೆಗೆ ನಗರದ ಬನ್ನಿ ಮಂಟಪದ ಬಳಿ ಚಾಲನೆ ನೀಡಲಾಗುವದೆಂದರು. ಮಹದೇವಪೇಟೆಯಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಆರಂಭದಲ್ಲಿ ಅಭಿಯಾನ ನಡೆಯಲಿದ್ದು, ನಂತರ ಇತರೆಡೆಗಳಿಗೆ ತೆರಳಲಾಗುವದು ಎಂದರು.

ಈ ಅಭಿಯಾನದಲ್ಲಿ ನಗರಸಭೆಯ ಕಾಂಗ್ರೆಸ್ ಸದಸ್ಯರುಗಳು ಹಾಗೂ ಕಾರ್ಯಕರ್ತರುಗಳು ಪಾಲ್ಗೊಳ್ಳಲಿದ್ದಾರೆ ಎಂದು ರಜಾóಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಐಎನ್‍ಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಬೀಡು ಹೂವಯ್ಯ, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಅಪ್ರು ರವೀಂದ್ರ ಉಪಸ್ಥಿತರಿದ್ದರು.