ಮಡಿಕೇರಿ, ಅ. 7: ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಮತ್ತು ಮಾಧ್ಯಮಿಕ ಶಿಕ್ಷಣ ಅಭಿಯಾನ ಇವರ ಸಂಯಕ್ತ ಆಶ್ರಯದಲ್ಲಿ ನಗರದ ಸಂತ ಜೋಸೆಫರ ಶಾಲೆಯಲ್ಲಿ ಶನಿವಾರ ನಡೆದ ಮಡಿಕೇರಿ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಿದರು. ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಬಹುಮಾನ ಪಡೆಯುವದು ಮುಖ್ಯವಲ್ಲ. ಸಿಕ್ಕ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕುವದು ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾತನಾಡಿ, ವಿವಿಧ ಹಂತದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳೆಲ್ಲರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವದರೊಂದಿಗೆ ವೇದಿಕೆಯನ್ನು ಬಳಸಿಕೊಳ್ಳಬೇಕೆಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಪಿ.ಎಸ್ ಜರ್ನಾಧನ, ಎನ್.ಕೆ ಮೆಹಬೂಬ್, ನಾಗಯ್ಯ ಶೆಟ್ಟಿ, ಮಹದೇವ ಮತ್ತಿತರರು ಇದ್ದರು.
ಗಮನ ಸೆಳೆದ ಛದ್ಮವೇಷ: ವಿದ್ಯಾರ್ಥಿಗಳಿಗಾಗಿ ಆಯೋಜನೆಗೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ಛದ್ಮವೇಶ ಸ್ಪರ್ಧೆ ಗಮನ ಸೆಳೆಯಿತು. ಕೆಲ ವಿದ್ಯಾರ್ಥಿಗಳು ಶ್ರೀ ಕೃಷ್ಣ, ವನ್ಯ ಜೀವಿಗಳು, ರಾಣಿ ಅಬ್ಬಕ್ಕ, ತಿರುಪತಿ ವೆಂಕಟರಮಣ, ಹತ್ತು ತಲೆಯ ರಾವಣ, ಭೂತಕೋಲ, ಏಕಲವ್ಯ, ಶಿಲಾ ಬಾಲಿಕೆ ಮುಂತಾದ ವೇಷ ತೊಟ್ಟು ಗಮನ ಸೆಳೆದರೆ, ಮತ್ತೆ ಕೆಲ ವಿದ್ಯಾರ್ಥಿಗಳು ಪ್ಲಾಸ್ಟಿಕ್ ವಸ್ತುಗಳ ಬಳಕೆ ಬೇಡ, ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಸಂದೇಶ ನೀಡಿದರು.
ಕ್ಲೇಮಾಡೆಲಿಂಗ್, ರಂಗೋಲಿ, ಕನ್ನಡ, ಇಂಗ್ಲೀಷ್, ಹಿಂದಿ ಕಂಠಪಾಠ, ಭಾಷಣ, ಜಾನಪದ, ಭಕ್ತಿಗೀತೆ, ಕೋಲಾಟ, ರಸಪ್ರಶ್ನೆ ಕಾರ್ಯಕ್ರಮ, ನಾಟಕ, ಚರ್ಚಾ ಸ್ಪರ್ಧೆ, ಧಾರ್ಮಿಕ ಪಠಣ ಮುಂತಾದ ಕಾರ್ಯಕ್ರಮದಲ್ಲಿ ಚಿಣ್ಣರು ಭಾಗವಹಿಸಿದ್ದರು.