ಸಿದ್ದಾಪುರ, ಅ. 7: ಅವರೆಗುಂದ ವ್ಯಾಪ್ತಿಯ ಅರಣ್ಯ ಪ್ರದೇಶದೊಳಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಮಾಡಲು ಗ್ರಾಮಸ್ಥರು ವಿರೋಧಿಸಿ, ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟಣದ ಕಸ ಹಾಗೂ ತ್ಯಾಜ್ಯ ವಸ್ತುಗಳು ಕೊಳೆತು ದುರ್ನಾತ ಬೀರುತ್ತಿದ್ದು. ಈ ಹಿನ್ನೆಲೆ ಸಾರ್ವಜನಿಕರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೇ ಕಳೆದೆರೆಡು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಸಿದ್ದಾಪುರ ಗ್ರಾ.ಪಂ.ಗೆ ಭೇಟಿ ನೀಡಿದ ಸಂದರ್ಭ ಸಮರ್ಪಕವಾಗಿ ಕಸ ವಿಲೇವಾರಿ ಮಾಡದಿರುವ ಬಗ್ಗೆ ಪಂಚಾಯಿತಿಯ ವಿರುದ್ಧ ಅಸಮಾಧಾನಗೊಂಡು ಪಿ.ಡಿ.ಓ. ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಕಸವನ್ನು ವಿಲೇವಾರಿ ಮಾಡುವ ಉದ್ದೇಶದಿಂದಾಗಿ ಗ್ರಾ.ಪಂ. ಅವರೆಗುಂದದ ಅರಣ್ಯ ಪ್ರದೇಶದಲ್ಲಿ ಜೆ.ಸಿ.ಬಿ.ಯಿಂದ ಗುಂಡಿ ತೋಡಿ ಕಸ ವಿಲೇವಾರಿ ಮಾಡಲು ಸಿದ್ಧತೆ ನಡೆಸಿತ್ತು. ಈ ಬಗ್ಗೆ ಮಾಹಿತಿ ತಿಳಿದ ಅವರೆಗುಂದ ಗ್ರಾಮಾಸ್ಥರು ಗ್ರಾ.ಪಂ. ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕಸ ವಿಲೇವಾರಿ ಮಾಡಲು ಬಿಡುವದಿಲ್ಲವೆಂದರು.

ಈ ಭಾಗದ ಅರಣ್ಯ ಪ್ರದೇಶದಲ್ಲಿ ವನ್ಯ ಪ್ರಾಣಿಗಳಿದ್ದು, ಕಸ ವಿಲೇವಾರಿ ಮಾಡಿದಲ್ಲಿ ಕಸ ತ್ಯಾಜ್ಯಗಳನ್ನು ಸೇವಿಸಿ ಪ್ರಾಣಿಗಳ ಪ್ರಾಣಕ್ಕೆ ಅಪಾಯವಾಗು ಸಾಧ್ಯತೆ ಇರುವ ಹಿನ್ನೆಲೆ ಇಲ್ಲಿ ಕಸ ವಿಲೇವಾರಿ ಮಾಡಲು ಬಿಡುವದಿಲ್ಲವೆಂದು ಗ್ರಾಮಸ್ಥರು ಹೇಳಿದರು. ಕಳೆದ ವರ್ಷ ಗ್ರಾ.ಪಂ. ವತಿಯಿಂದ ಕಸ ವಿಲೇವಾರಿಗೆ ಅರಣ್ಯ ಪ್ರದೇಶದ ಒಳಗೆ ತೆಗೆದಿಟ್ಟಿದ್ದ ಗುಂಡಿಯೊಂದಕ್ಕೆ ಎರಡು ಕಾಡಾನೆ ಮರಿಗಳು ಬಿದ್ದು ಆನಾಹುತ ಸಂಭವಿಸಿತ್ತು. ಇದೀಗ ಮತ್ತೊಮ್ಮೆ ಪಂಚಾಯಿತಿ ಅರಣ್ಯ ಪ್ರದೇಶದೊಳಗೆ ಗುಂಡಿ ತೆಗೆದು ಕಸ ವಿಲೇವಾರಿ ಮಾಡಲು ಮುಂದಾಗಿರುವದು ಖಂಡನೀಯ ಎಂದು ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಗುಂಡಿ ತೆಗೆಯಲು ಬಂದಿದ್ದ ಜೆ.ಸಿ.ಬಿ.ಯನ್ನು ಹಿಂದಕ್ಕೆ ಕಳುಹಿಸಿದರು.