ಮಡಿಕೇರಿ, ಅ. 6: ಜಿಲ್ಲೆಯಲ್ಲಿ ಕಾರ್ಯಾರಂಭಗೊಂಡಿರುವ ವೈದ್ಯಕೀಯ ಕಾಲೇಜಿನ ಅಧೀನಕ್ಕೆ ಇದೀಗ ಮಡಿಕೇರಿಯ ಜಿಲ್ಲಾಸ್ಪತ್ರೆಯೂ ಒಳಗೊಂಡಿದೆ. 2017ರ ಏಪ್ರಿಲ್‍ನಿಂದ ಜಿಲ್ಲಾಸ್ಪತ್ರೆ ಅಧಿಕೃತವಾಗಿ ಆಡಳಿತಾತ್ಮಕವಾಗಿ ವೈದ್ಯಕೀಯ ಕಾಲೇಜಿನ ಅಧೀನಕ್ಕೆ ಒಳಪಟ್ಟಿದೆ. ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾಸ್ಪತ್ರೆಗೆ ಡಿ ದರ್ಜೆ ಕಾರ್ಮಿಕರು, ಸಫಾಯಿ ಕರ್ಮಚಾರಿ, ಡಾಟಾ ಎಂಟ್ರಿ ಆಪರೇಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಕಳೆದ ಬಾರಿ ಈ ಎರಡು ಕೇಂದ್ರಗಳು ಪ್ರತ್ಯೇಕವಾಗಿದ್ದು, 80 ಮಂದಿ ಹೊರಗುತ್ತಿಗೆ ಆಧಾರದ ನೌಕರರು ಇದ್ದರು. ಈ ಟೆಂಡರನ್ನು ಬೆಂಗಳೂರಿನ ಸ್ವಿಸ್ ಎಂಬ ಸಂಸ್ಥೆ ಪಡೆದುಕೊಂಡಿತ್ತು.

ಇದೀಗ ಈ ಟೆಂಡರ್‍ನ ಅವಧಿ ಮುಕ್ತಾಯಗೊಂಡಿದ್ದು, ಎರಡು ಕೇಂದ್ರಗಳು ಒಂದೇ ಆಡಳಿತಕ್ಕೆ ಒಳಪಟ್ಟಿರುವದರಿಂದ ಸುಮಾರು 200 ಮಂದಿ ವಿವಿಧ ಹುದ್ದೆಯ ನೌಕರರು ಬೇಕಾಗಿದ್ದಾರೆ. ಈ ಹುದ್ದೆಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬೇಕಿದ್ದು, ಈ ಬಾರಿಯ ಟೆಂಡರ್ ಅನ್ನು ಮೈಸೂರಿನ ರಂಗನಾಥ್ ಎಂಟರ್ ಪ್ರೈಸಸ್ ಸಂಸ್ಥೆ ಪಡೆದುಕೊಂಡಿದೆ. ಅಕ್ಟೋಬರ್ 1ರಿಂದ ಈ ಸಂಸ್ಥೆ ಕಾರ್ಮಿಕರನ್ನು ಒದಗಿಸುತ್ತಿದೆ. ಹೊರಗುತ್ತಿಗೆ ಆಧಾರದಲ್ಲಿ ಕಳೆದ 15 ವರ್ಷಗಳಿಂದಲೂ ಕೆಲವು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದೀಗ ಟೆಂಡರ್ ಪಡೆದಿರುವ ಸಂಸ್ಥೆ ಕಾರ್ಮಿಕರಿಂದ ಠೇವಣಿ ಕೇಳುತ್ತಿರುವದಾಗಿ ಆರೋಪ ಕೇಳಿ ಬಂದಿದೆ. ರೂ. 10 ಸಾವಿರದಿಂದ ರೂ. 30 ಸಾವಿರದ ವರೆಗೆ ಠೇವಣಿ ಇಡಬೇಕು ಎಂಬ ಒತ್ತಾಯ ಬರುತ್ತಿರುವದಾಗಿ ಹಲವರು ಆಕ್ಷೇಪಿಸಿದ್ದಾರೆ. ಕಳೆದ ಬಾರಿಯ ಸಂಸ್ಥೆಯೂ ಈ ಬೇಡಿಕೆ ಮುಂದಿಟ್ಟಿತ್ತು ಎನ್ನಲಾಗಿದ್ದು, ಇದು ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು. ಟೆಂಡರ್ ಪಡೆದಿರುವ ಸಂಸ್ಥೆ ಹೊರಗುತ್ತಿಗೆ ಆಧಾರದಲ್ಲಿ ಒದಗಿಸುವ ಕಾರ್ಮಿಕರನ್ನು ಕೆಲಸದ ವಿಚಾರದಲ್ಲಿ ನಿಯಂತ್ರಿಸಬಹುದೇ ವಿನಃ ಕಾನೂನಿನಂತೆ ಅವರಿಂದ ಠೇವಣಿ ಸಂಗ್ರಹಿಸುವಂತಿಲ್ಲ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಕಾಲೇಜಿನ ಡೀನ್ ಮಹೇಂದ್ರ ಅವರು ಇದು ನಮ್ಮ ನಿಯಂತ್ರಣಕ್ಕೆ ಬಾರದ ವಿಚಾರ ಕಾನೂನು ಪ್ರಕಾರ ಟೆಂಡರ್ ಕರೆಯಲಾಗಿದ್ದು, ಕಡಿಮೆ ಟೆಂಡರ್ ಹಾಕಿದವರಿಗೆ ಗುತ್ತಿಗೆ ನೀಡಲಾಗಿದೆ. ಅವರು ಅಗತ್ಯ ಕಾರ್ಮಿಕರನ್ನು ಒದಗಿಸುತ್ತಿದ್ದಾರೆ. ಈ ವಿಚಾರದಲ್ಲಿ ಆಡಳಿತಾತ್ಮಕವಾಗಿ ತಮ್ಮ ಸಂಸ್ಥೆಯ ಪಾತ್ರ ಇಲ್ಲ ಎಂದಿದ್ದಾರೆ.

ಇತ್ತ ಸಂಬಂಧಿತ ಇಲಾಖೆಗಳ ಗಮನ ಅಗತ್ಯವಿದೆ. -ಶಶಿ.