ಭಾಗಮಂಡಲ, ಅ. 7: ಕಾವೇರಿ ಪುಷ್ಕರ ಸ್ನಾನ ಹೆಸರಿನಲ್ಲಿ ಆಂಧ್ರಪ್ರದೇಶದಿಂದ ಏಕಕಾಲಕ್ಕೆ ನೂರಾರು ವಾಹನಗಳಲ್ಲಿ ತೀರ್ಥಕ್ಷೇತ್ರಕ್ಕೆ ಬಂದು, ಸ್ಥಳೀಯ ಸಂಪ್ರದಾಯ ವಿರುದ್ಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿರುವ ಕುರಿತು ತನಿಖೆ ನಡೆಸುವಂತೆ ಶಾಸಕದ್ರಯರಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು. ಇಲ್ಲಿನ ಕೇಶಮುಂಡನ ಕ್ಷೇತ್ರದಲ್ಲಿ ಇಂದು ನಡೆದ ತುಲಾ ಸಂಕ್ರಮಣ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಶಾಸಕತ್ರಯರು ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ವಿರುದ್ಧ ಹರಿಹಾಯ್ದರು.ಆಂಧ್ರಪ್ರದೇಶದ ಜನರಿಗೆ ಪೂರ್ವಾನುಮತಿಯಿಲ್ಲದೆ ಪುಷ್ಕರ ಸ್ನಾನದೊಂದಿಗೆ ಪಿತೃಕಾರ್ಯ, ಪೂಜಾದಿಗಳಿಗೆ ಕೊಡಗಿನ ಧಾರ್ಮಿಕ ವಿಧಿಗಳ ವಿರುದ್ಧ ಅವಕಾಶ ನೀಡಿರುವ ಬಗ್ಗೆ ತನಿಖೆ ನಡೆಸಿ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಯಾವದೇ ಮುನ್ಸೂಚನೆಯಿಲ್ಲದೆ ಹೊರರಾಜ್ಯದ ಜನ ನೂರಾರು ಬಸ್‍ಗಳಲ್ಲಿ ಬಂದಿಳಿದಿದ್ದರಿಂದ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾದುದಾಗಿ ಅಧಿಕಾರಿ ಜಗದೀಶ್ ಕುಮಾರ್ ಹಾಗೂ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಸಭೆಯ ಗಮನ ಸೆಳೆದರು. ಈ ವೇಳೆ ದನಿಗೂಡಿಸಿದ ಕಾಳನ ರವಿ ಹಾಗೂ ರವೀಂದ್ರ ಹೆಬ್ಬಾರ್ ಜನ- ಜಂಗುಳಿ ವಿಪರೀತವಾಗಿ ಪರಿಸ್ಥಿತಿ ಕೈಮೀರಲು ಆಡಳಿತಾಧಿಕಾರಿ ಸೇರಿದಂತೆ ಎಲ್ಲರೂ ಹೊಣೆಯೆಂದು ನೆನಪಿಸಿದರು.
ಮುಂದೆ ಹೀಗಾಗದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮದೊಂದಿಗೆ ಪೊಲೀಸ್ ರಕ್ಷಣೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಸ್ವಚ್ಛತೆಗೆ ಆದ್ಯತೆ ದಿಸೆಯಲ್ಲಿ ದೇವಾಲಯ ಸಮಿತಿಯು ಕ್ರಮ ವಹಿಸುವದರೊಂದಿಗೆ ತಲಕಾವೇರಿ ಹಾಗೂ ಭಾಗಮಂಡಲ ದ್ವಾರಗಳಿಗೆ ಸೂಕ್ತ ಭದ್ರತೆಗಾಗಿ ಬಾಗಿಲುಗಳ ನಿರ್ಮಾಣಕ್ಕೆ ಆಗ್ರಹಿಸಿದರು. ಈಗಾಗಲೇ ಈ ಬಗ್ಗೆ ಗಮನ ಹರಿಸಿದ್ದು, ಜಾತ್ರೆಯ 1 ತಿಂಗಳೊಳಗೆ ನಿರ್ಮಿತಿ ಕೇಂದ್ರದಿಂದ ಬಾಗಿಲು ಅಳವಡಿಸಲಾಗುವದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ನುಡಿದರು.
ಅರಣ್ಯಾಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ ಕೆ.ಜಿ. ಬೋಪಯ್ಯ, ‘ಕಳ್ಳರೊಂದಿಗೆ ಶಾಮೀಲಾಗಿ ಅರಣ್ಯ ನಾಶದಲ್ಲಿ ತೊಡಗಿರುವ ನೀವು ಅಭಿವೃದ್ಧಿ ಕೆಲಸಗಳಿಗೆ, ರಸ್ತೆ ಸಂಪರ್ಕಕ್ಕೆ ಅಡ್ಡಿಪಡಿಸುತ್ತೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಅಡ್ಡಿಗಳ ನಡುವೆಯೂ
(ಮೊದಲ ಪುಟದಿಂದ) ಪಾಣತ್ತೂರು- ಭಾಗಮಂಡಪ- ಮಡಿಕೇರಿ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಯಾಗಲಿದೆ ಎಂದು ಸಭೆಯಲ್ಲಿ ಭರವಸೆಯ ನುಡಿಯಾಡಿದರು.
ತೀರ್ಥಕ್ಷೇತ್ರಕ್ಕೆ ಹೊರಗಿನಿಂದ ಬರುವವರಿಗೆ ಇಲ್ಲಿನ ಸಂಪ್ರದಾಯ ಪಾಲಿಸುವದು, ಛಾಯಾಚಿತ್ರ ತೆಗೆಯುವದು, ವಸ್ತ್ರಸಂಹಿತೆ ಪಾಲಿಸುವದು ಸೇರಿದಂತೆ ಅಗತ್ಯ ಗಮನ ಹರಿಸಲು ದೇವಾಲಯ ಆಡಳಿತ ನಿಗಾವಹಿಸಲು ಸೂಚಿಸಿದರು. ಸ್ನಾನಘಟ್ಟದಲ್ಲಿ ಸ್ತ್ರೀಯರಿಗೆ ವಸ್ತ್ರ ಬದಲಾಯಿಸಲು ಅಗತ್ಯ ವ್ಯವಸ್ಥೆ, ಉಭಯ ಕ್ಷೇತ್ರಗಳಲ್ಲಿ ಶೌಚಾಲಯ ಇತ್ಯಾದಿ ಮೂಲಭೂತ ಸೌಕರ್ಯಗಳಿಗೆ ಜಾತ್ರೆ ಸಂದರ್ಭ ಒತ್ತು ನೀಡಲು ನಿರ್ಣಯಿಸಲಾಯಿತು.
ಒಂದು ಹಂತದಲ್ಲಿ ಲೋಕೋಪಯೋಗಿ, ಅರಣ್ಯಾಧಿಕಾರಿಗಳು ಸೇರಿದಂತೆ ದೇವಾಲಯ ಆಡಳಿತ, ಪೂಜಾ ವ್ಯವಸ್ಥೆಯಿಂದ ಭಕ್ತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಹಿರಿಯ ಅರ್ಚಕ ನಾರಾಯಣಾಚಾರ್ ತೀರ್ಥವನ್ನು ಡ್ರಂಗಳಲ್ಲಿ ಸಂಗ್ರಹಿಸಿ ಬೇರೆಡೆಯಿಂದ ಭಕ್ತರು ಪೈಪ್‍ಗಳ ಮುಖಾಂತರ ತುಂಬಿಸಿಕೊಳ್ಳಲು ಸಲಹೆ ನೀಡಿದರು. ಇನ್ನೋರ್ವ ಅರ್ಚಕ ಪ್ರಶಾಂತ್ ಆಚಾರ್ ತಲಕಾವೇರಿಯ ಸ್ನಾನದ ಕೊಳದ ಕೆಳಭಾಗದಲ್ಲಿ ಪ್ರತ್ಯೇಕ ಸ್ನಾನಘಟ್ಟಕ್ಕೆ ಕೋರಿದಾಗ, ಸಭೆಯಲ್ಲಿ ವಿರೋಧ ವ್ಯಕ್ತಗೊಂಡಿತು.
ಈ ಎಲ್ಲಾ ಸೂಕ್ಷ್ಮತೆ ಗಮನಿಸಿದ ಶಾಸಕ ಕೆ.ಜಿ. ಬೋಪಯ್ಯ, ಇತರ ಸಮಸ್ಯೆಗಳನ್ನು ಜಾತ್ರೆ ಬಳಿಕ ಸಭೆ ಕರೆದು ಚರ್ಚಿಸುವ ಭರವಸೆಯೊಂದಿಗೆ ಇಂದಿನ ಸಭೆಗೆ ತೆರೆ ಎಳೆದರು. -ಚಿತ್ರ, ವರದಿ: ಕುಯ್ಯಮುಡಿ ಸುನಿಲ್.