ಭಾಗಮಂಡಲ, ಅ. 7: ತಾ. 17ರಂದು ಮಧ್ಯಾಹ್ನ 12.33 ಗಂಟೆಗೆ ಸಲ್ಲುವ ಧನುರ್ಲಗ್ನದಲ್ಲಿ ಶ್ರೀ ಕಾವೇರಿ ತೀರ್ಥೋದ್ಭವದೊಂದಿಗೆ ಒಂದು ತಿಂಗಳು ಜರುಗಲಿರುವ ಜಾತ್ರಾ ಮಹೋತ್ಸವ ಸಂಬಂಧ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯಿಂದ ಜಾತ್ರೆಯ ತಯಾರಿ ಯೊಂದಿಗೆ ಎಲ್ಲರ ಸಹಕಾರದಿಂದ ಯಶಸ್ವಿಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳ ಪಾವಿತ್ರ್ಯಕ್ಕೆ ಕುಂದು ಬಾರದಂತೆ ಎಲ್ಲ ರೀತಿ ಮುಂಜಾಗ್ರತಾ ಕ್ರಮದೊಂದಿಗೆ ಭಕ್ತಾದಿಗಳಿಗೆ ಧಾರ್ಮಿಕ ಕೈಂಕರ್ಯ ನಿರ್ವಹಿಸಲು ತೊಂದರೆಯಾಗದಂತೆ ದೇವಾಲಯಗಳ ಆಡಳಿತವು ಗಮನ ಹರಿಸುವಂತೆ ನಿರ್ಧರಿಸಲಾಯಿತು.
ತೀರ್ಥ ಕ್ಷೇತ್ರಕ್ಕೆ ಬರುವವರಿಗೆ ಸಮರ್ಪಕ ವಾಹನಗಳ ನಿಲುಗಡೆ, ಸಂಜೆಗತ್ತಲೆಯಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ, ಪೊಲೀಸ್ ಇಲಾಖೆಯಿಂದ ರಕ್ಷಣೆ, ತೀರ್ಥ ಕುಂಡಿಕೆ ಬಳಿ ನೂಕು ನುಗ್ಗಲು ತಪ್ಪಿಸಲು ಗಮನಹರಿಸುವದು ಸೇರಿದಂತೆ ವಿವಿಧ ಇಲಾಖೆಗಳಿಂದ ಕಾವೇರಿ ಜಾತ್ರೆಯು ಯಶಸ್ಸು ಕಾಣುವಲ್ಲಿ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಲೋಕೋಪಯೋಗಿ ಇಲಾಖೆ ಯಿಂದ ಜಾತ್ರೆಗೆ ಮುನ್ನ ತಲಕಾವೇರಿ - ಭಾಗಮಂಡಲ ಸಂಪರ್ಕಿಸುವ ಎಲ್ಲ ಕಡೆಗಳ ರಸ್ತೆಗಳ ಗುಂಡಿ ಮುಚ್ಚುವದು, ಮಾರ್ಗ ಬದಿ ಕಾಡು ಕಡಿದು ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಕ್ರಮ ಕೈಗೊಳ್ಳುವದು. ಈ ನಿಟ್ಟಿನಲ್ಲಿ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಕಾರ್ಯೋನ್ಮುಖರಾಗುವಂತೆ ಉಭಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ಅಂತೆಯೇ ರಸ್ತೆ ಸಾರಿಗೆ ಇಲಾಖೆ ಮತ್ತು ರಾಜ್ಯ ಸಾರಿಗೆ ಬಸ್‍ಗಳನ್ನು ಭಕ್ತರ ಅನುಕೂಲಕ್ಕೆ ತಕ್ಕಂತೆ ಎಲ್ಲೆಡೆಯಿಂದ ವ್ಯವಸ್ಥೆಗೊಳಿಸುವಂತೆ ಸೂಚಿಸಲಾಯಿತು. ವೀರಾಜಪೇಟೆ, ಸೋಮವಾರಪೇಟೆ, ಮಡಿಕೇರಿಯಿಂದ ಸಾಕಷ್ಟು ಬಸ್‍ಗಳನ್ನು ಯಾತ್ರಾರ್ಥಿಗಳಿಗಾಗಿ ಒದಗಿಸಲು ತೀರ್ಮಾನಿಸಲಾಯಿತು.
ವಿದ್ಯುತ್ ಸಮಸ್ಯೆ ಎದುರಾಗದಂತೆ ಗಮನಿಸುವದು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸಾಂಸ್ಕøತಿಕ ಕಾರ್ಯಕ್ರಮ, ಶಿಕ್ಷಣ ಇಲಾಖೆಯಿಂದ ರಕ್ಷಣಾ ವ್ಯವಸ್ಥೆ
(ಮೊದಲ ಪುಟದಿಂದ) ಸಿಬ್ಬಂದಿಗಳಿಗೆ ಶಾಲಾ ಕಟ್ಟಡ ಕಲ್ಪಿಸುವದು, ಗ್ರಾಮ ಪಂಚಾಯಿತಿ ಕೂಡ ಕ್ಷೇತ್ರದ ಸ್ವಚ್ಛತೆಯಲ್ಲಿ ಕೈಜೋಡಿಸುವದು, ಆರೋಗ್ಯ ಇಲಾಖೆಯಿಂದ ತುರ್ತು ಸೇವೆ, ತೋಟಗಾರಿಕೆ ಹಾಗೂ ಇತರ ಇಲಾಖೆಗಳಿಂದ ಪ್ರದರ್ಶಿನಿ ಮುಂತಾದ ಬಗ್ಗೆ ಪ್ರಸ್ತಾಪಿಸಲಾಯಿತು.
ಕೊಡಗು ಏಕೀಕರಣ ರಂಗ ಸೇರಿದಂತೆ ಭಕ್ತರಿಗೆ ಸಂಘ-ಸಂಸ್ಥೆಗಳಿಂದ ಅನ್ನದಾನ ವ್ಯವಸ್ಥೆ ಕಲ್ಪಿಸಲು ಎಲ್ಲರ ಸಹಕಾರಕ್ಕೆ ಸಲಹೆ ಕೇಳಿ ಬಂತು. ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಹೊರ ಜಿಲ್ಲೆಯ ಕೊಡಗಿನ ಪ್ರತಿನಿಧಿಗಳು ತೀರ್ಥಕ್ಕೆ ಬರುವ ವಾಹನಗಳಿಗೆ ಅಡ್ಡಿಪಡಿಸದಂತೆ ಸಲಹೆ ನೀಡಲಾಯಿತು.
ತೀರ್ಥ ರಥಗಳಿಗೆ ಸಮಯ : ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಕಾವೇರಿ ತೀರ್ಥ ಕೊಂಡೊಯ್ಯಲು ಬರುವ ರಥ ಅಥವಾ ವಾಹನಗಳಿಗೆ ತೀರ್ಥೋದ್ಭವ ಕಳೆದು 2 ಗಂಟೆಗಳ ಬಳಿಕವಷ್ಟೇ ಭಾಗಮಂಡಲದಿಂದ ತಲಕಾವೇರಿಗೆ ತೆರಳು ಅವಕಾಶ ನೀಡಲು ನಿರ್ಣಯಿಸಲಾಯಿತು. ನೂಕು ನುಗ್ಗಲು ಹಾಗೂ ಸಂಚಾರ ಅಡಚಣೆ ತಪ್ಪಿಸಲು ಈ ಕ್ರಮಕ್ಕೆ ಸಭೆ ತೀರ್ಮಾನಿಸಿತು.
ಪ್ರವಾಸಿ ತಾಣವಲ್ಲ : ತುಲಾ ಸಂಕ್ರಮಣ ಸೇರಿದಂತೆ ಇತರ ಸಂದರ್ಭಗಳಲ್ಲಿ ಕ್ಷೇತ್ರಕ್ಕೆ ಬರುವವರಿಗೆ ಇದೊಂದು ಪವಿತ್ರ ತೀರ್ಥ ಕ್ಷೇತ್ರವಾಗಿದ್ದು, ಪ್ರವಾಸಿ ತಾಣವಲ್ಲ ಎಂಬ ಬಗ್ಗೆ ಅರಿವು ಮೂಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಭೆ ನಿರ್ಣಯಿಸಿತು. ಈ ದಿಸೆಯಲ್ಲಿ ದೇವಾಲಯ ಸಮಿತಿ ಸೂಚನಾ ಫಲಕಗಳನ್ನು ಅಳವಡಿಸಿ ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಲಾಯಿತು.
ತುಲಾ ಸಂಕ್ರಮಣ ಜಾತ್ರೆ ಪೂರ್ವ ತಯಾರಿ ಕುರಿತು ಶಾಸಕತ್ರಯರಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‍ಕುಮಾರ್, ಕೊಡವ ಸಾಹಿತ್ಯ ಅಕಾಡೆಮಿ ನಿರ್ಗಮಿತ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಹಿರಿಯರಾದ ಎಂ.ಬಿ. ದೇವಯ್ಯ, ನಾರಾಯಣಾಚಾರ್, ರವೀಂದ್ರ ಹೆಬ್ಬಾರ್, ಕುದುಕುಳಿ ಭರತ್, ಪ್ರಶಾಂತ್ ಆಚಾರ್, ಕಾರ್ಯನಿರ್ವಹಣಾಧಿಕಾರಿ ಜಗದೀಶ್‍ಕುಮಾರ್, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಪ್ರಭು, ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್ ಸೇರಿದಂತೆ ಇತರರು ಸಲಹೆಗಳನ್ನು ನೀಡಿದರು.
ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ದೇವತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಎಸ್ಪಿ ರಾಜೇಂದ್ರ ಪ್ರಸಾದ್, ಡಿವೈಎಸ್ಪಿ ಸುಂದರರಾಜ್, ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ, ಸ್ಥಳೀಯ ಪ್ರಮುಖರಾದ ಕಾಳನ ರವಿ, ಪ್ರಭಾಕರ, ಗ್ರಾ.ಪಂ. ಪ್ರತಿನಿಧಿಗಳಾದ ಸುಮಿತ್ರಾ, ಸಂಧ್ಯಾ ಸೇರಿದಂತೆ ಇತರ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಪ್ರಮುಖ ಇಲಾಖಾ ಅಧಿಕಾರಿಗಳು ಭಾಗವಹಿಸಿ ಜಾತ್ರೆಯ ಯಶಸ್ಸಿಗೆ ಸಹಮತ ವ್ಯಕ್ತಪಡಿಸಿದರು.