ಸೋಮವಾರಪೇಟೆ, ಅ.6: ತಾಲೂಕಿನ ಕೂಡಿಗೆ ಸಮೀಪದ ಹಳೆಗೋಟೆ-ಅಂದಾನಿಪುರದಲ್ಲಿ ಪೊಲೀಸ್ ಅಕಾಡೆಮಿ ಸ್ಥಾಪನೆಗೆ ಮೀಸಲಿಟ್ಟಿರುವ 100 ಏಕರೆ ಜಾಗದಲ್ಲಿ ದಲಿತರು ಈಗಾಗಲೇ ಕೃಷಿ ಕಾರ್ಯಕೈಗೊಂಡಿದ್ದು, ಈ ಜಾಗವನ್ನು ದಲಿತರಿಗೆ ನೀಡಬೇಕೆಂದು ದಲಿತಪರ ಸಂಘಟನೆಗಳ ಪ್ರಮುಖರು ಆಗ್ರಹಿಸಿದರು.ತಾಲೂಕು ತಹಶೀಲ್ದಾರ್ ಮಹೇಶ್ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮುಖಂಡರುಗಳು ಈ ಬಗ್ಗೆ ಒತ್ತಾಯಿಸಿದರು.
ಹಳೆಗೋಟೆ ಗ್ರಾಮದ ಅಂದಾನಿಪುರದಲ್ಲಿ ಕಳೆದ ಅನೇಕ ವರ್ಷಗಳಿಂದ ದಲಿತರು ಕೃಷಿ ಕಾರ್ಯಕೈಗೊಂಡಿದ್ದು, ಇತ್ತೀಚೆಗೆ ಜಿಲ್ಲಾಧಿಕಾರಿಗಳು ಈ ಪ್ರದೇಶದ 100 ಏಕರೆ ಜಾಗವನ್ನು ಪೊಲೀಸ್ ಅಕಾಡೆಮಿ ಸ್ಥಾಪನೆಗೆ ಕಾಯ್ದಿರಿಸಿದ್ದಾರೆ. ಈ ಆದೇಶವನ್ನು ಪುನರ್ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆ ಸ್ಥಳದಲ್ಲಿ ಕೃಷಿ ಕೈಗೊಳ್ಳದೇ ಇದ್ದಲ್ಲಿ ಅಕಾಡೆಮಿಗೆ ನೀಡಲಿ. ಕೃಷಿಕಾರ್ಯ ಪ್ರಗತಿಯಲ್ಲಿದ್ದರೆ ಸ್ಥಳೀಯ ಕೃಷಿಕರಿಗೇ ಭೂಮಿಯನ್ನು ಬಿಟ್ಟುಕೊಡಬೇಕೆಂದು ಡಿ.ಎಸ್. ನಿರ್ವಾಣಪ್ಪ ಸಭೆಯ ಗಮನ ಸೆಳೆದರು.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವದರೊಂದಿಗೆ ಸಭಾ ನಿರ್ಣಯ ಪ್ರತಿಯನ್ನು ಕಳುಹಿಸಿಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲೂಕಿನ ಶನಿವಾರಸಂತೆ ನಾಡಕಚೇರಿಯಲ್ಲಿ ದಲಿತರಿಗೆ ಸಂಬಂಧಿಸಿದ ಭೂ ದಾಖಲೆ ವ್ಯವಹಾರಗಳು ನಡೆಯುತ್ತಿಲ್ಲ. ಇಲ್ಲಿನ ಕೆಲವೊಂದು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, 94 ಸಿ. ಗೆ ಸಂಬಂಧಿಸಿದ ದಾಖಲೆಗಳು ಉಪ ತಹಶೀಲ್ದಾರ್ಗೆ ಹೋಗುವ ಮೊದಲೇ ಏಜೆಂಟರು ತಡೆಯುತ್ತಾರೆ. ಲಂಚ ನೀಡದಿದ್ದರೆ ಕಡತಗಳೇ ನಾಪತ್ತೆಯಾಗುತ್ತಿವೆ ಎಂದು ರಾಜಪ್ಪ, ನಿರ್ವಾಣಪ್ಪ, ಜಯಮ್ಮ ಸೇರಿದಂತೆ ಇತರರು ಸಭೆಯಲ್ಲಿ ಆರೋಪಿಸಿದರು.
ಈ ಬಗ್ಗೆ ತಕ್ಷಣ ಗಮನ ಹರಿಸಲಾಗುವದು. ಸರ್ಕಾರಿ ಕೆಲಸಕ್ಕೆ ಯಾರೂ ಲಂಚ ನೀಡಬೇಕಾಗಿಲ್ಲ ಎಂದು ತಹಶೀಲ್ದಾರ್ ಆಶ್ವಾಸನೆ ನೀಡಿದರು.
ಯಡೂರು ಗ್ರಾಮದ ದಲಿತ ಯುವಕ ಸ್ವೀಕಾರ್ ಸಾವಿನ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಸಭೆಯಲ್ಲಿದ್ದ ಜಯಪ್ಪ ಹಾನಗಲ್ ಮನವಿ ಮಾಡಿದರು. ಸ್ವೀಕಾರ್ ಸಾವು ಪ್ರಕರಣವನ್ನು ಆತ್ಮಹತ್ಯೆ ಎಂದು ಪೊಲೀಸರು ವರದಿ ನೀಡಿದ್ದಾರೆ ಎಂದು ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ ತಿಳಿಸಿದರು. ಇದಕ್ಕೆ ತೃಪ್ತರಾಗದ ಪ್ರಮುಖರು ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯುವಂತೆ ತೀರ್ಮಾನಿಸಲಾಯಿತು.
ಎಸ್ಸಿ ಎಸ್ಟಿ ಹಿತರಕ್ಷಣಾ ಸಮಿತಿ ಸಭೆಗೆ ಆದಿವಾಸಿಗಳನ್ನೂ ಕರೆಯಬೇಕು. ಅವರುಗಳ ಅಹವಾಲುಗಳನ್ನೂ ಆಲಿಸಬೇಕೆಂದು ಸಮಿತಿ ಸದಸ್ಯೆ ಹೆಚ್.ಬಿ. ಜಯಮ್ಮ ಸಭೆಯ ಗಮನ ಸೆಳೆದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ದಲಿತರಿಗೆ ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಬಳಕೆಯಾಗಿದೆಯೇ, ಅನುದಾನ ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಸದಸ್ಯ ಹನುಮಯ್ಯ ಪ್ರಶ್ನಿಸಿದರು.
ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿಟ್ಟ ಅನುದಾನ ಬಳಕೆಯಲ್ಲಿ ವಿಫಲರಾಗಿರುವ 7 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖಾಧಿಕಾರಿ ರಾಮೇಗೌಡ ತಿಳಿಸಿದರು.
ಸಭೆಯಲ್ಲಿ ಡಿವೈಎಸ್ಪಿ ಸಂಪತ್ಕುಮಾರ್, ಕೃಷಿ ಇಲಾಖಾ ಸಹಾಯಕ ನಿರ್ದೇಶಕ ರಾಜಶೇಖರ್, ತೋಟಗಾರಿಕಾ ಇಲಾಖೆಯ ಗಣೇಶ್, ಜಿ.ಪಂ. ಅಭಿಯಂತರ ವೀರೇಂದ್ರ, ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಮಂಚಯ್ಯ, ಬಿಸಿಎಂ ವಿಸ್ತರಣಾಧಿಕಾರಿ ಸ್ವಾಮಿ, ಲೋಕೋಪಯೋಗಿ ಇಲಾಖಾ ಅಭಿಯಂತರ ಮಹೇಂದ್ರ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರಾದ ಪಾಲಾಕ್ಷ, ಹೊನ್ನಪ್ಪ, ದಿವಾಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.