ವೀರಾಜಪೇಟೆ, ಅ. 6: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದಿಂದ ರಾಜ್ಯಕ್ಕೆ ಬರುವ ಯೋಜನೆಗಳನ್ನು ರಾಜ್ಯ ಸರಕಾರದ್ದೆಂದು ಹೇಳಿಕೊಂಡು ಅದಕ್ಕೆ ಹೊಸದಾಗಿ ನಾಮಕರಣ ಮಾಡಿ ಪ್ರಚಾರ ಮಾಡಿಕೊಳ್ಳುತ್ತಿ ದ್ದಾರೆ. ಸಿದ್ದರಾಮಯ್ಯ ಅವರಿಗೆ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ವೀರಾಜಪೇಟೆ ಬಿ.ಜೆ.ಪಿ. ತಾಲೂಕು ಸಮಿತಿಯಿಂದ ಚೆಂಬೆ ಬೆಳ್ಳೂರು ಗ್ರಾಮದ ಕೃಷಿ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ಮೂರುವರೆ ವರ್ಷಗಳ ಸಾಧನೆಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಡವರು ಕಡು ಬಡವರಿಗೆ ಪಡಿತರ ಕಾರ್ಡಿನಲ್ಲಿ ವಿತರಣೆಯಾಗುವ ಅಕ್ಕಿಗೆ ಕೇಂದ್ರ ಸರಕಾರ ಕೆ.ಜಿ.ಅಕ್ಕಿಗೆ ರೂ.29 ನೀಡಿದರೆ ರಾಜ್ಯ ಸರಕಾರ ರೂ. 3 ನೀಡುತ್ತಿದೆ. ಇದರ ಪೂರ್ತಿ ಹಣ ರಾಜ್ಯ ಸರಕಾರದ್ದೆಂದು ಅಪಪ್ರಚಾರ ಮಾಡಲಾಗುತ್ತಿದೆ. ಕಸ್ತೂರಿ ರಂಗನ್ ವರದಿ ಕುರಿತು ಕಿಂಚಿತ್ತು ಆಸಕ್ತಿ ವಹಿಸದೆ ಅಧಿಕೃತವಾಗಿ ಆಕ್ಷೇಪಣೆಯನ್ನು ಸಲ್ಲಿಸದೆ ಕೊಡಗಿನ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ದೂರಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೇಂದ್ರ ಸರಕಾರದ ಸಾಧನೆಗಳಿಗೆ ಹೋಲಿಸಿದರೆ ರಾಜ್ಯ ಸರಕಾರದ ಸಾಧನೆ ಶೂನ್ಯ. ಕಾಂಗ್ರೆಸ್ ಪಕ್ಷ ಪ್ರಚಾರದಲ್ಲಿ ಮುಂದಿದೆ ಎಂದು ಆರೋಪಿಸಿದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೊಡಗು ಜಿಲ್ಲೆಗೆ ರೂ. 200 ಕೋಟಿ ಅನುದಾನದಲ್ಲಿ ರೂ. 41 ಕೋಟಿ ಬಿಡುಗಡೆ ಮಾಡಿದೆ. ರಾಜ್ಯ ಸರಕಾರ ಪ್ರತಿ ಹಂತದಲ್ಲಿಯೂ ಆಡಳಿತದಲ್ಲಿ ವೈಫಲ್ಯವನ್ನು ಕಂಡಿದೆ. ಈಗಿನ ಮನೆ ಮನೆಗೆ ಕಾಂಗ್ರೆಸ್ ನಡೆ ಜನತೆಯನ್ನು ದಿಕ್ಕು ತಪ್ಪಿಸುವ ನಡೆಯಾಗಿದೆ ಎಂದು ಟೀಕಿಸಿದರು.
ಸಭೆಯ ಅಧ್ಯಕ್ಷತೆಯನ್ನು ಚೆಂಬೆಬೆಳ್ಳೂರು ಸ್ಥಾನೀಯ ಸಮಿತಿ ಅಧ್ಯಕ್ಷ ಬೋಪಣ್ಣ ವಹಿಸಿದ್ದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಆರ್.ಎಂ.ಸಿ.ಅಧ್ಯಕ್ಷ ಸುವಿನ್ ಗಣಪತಿ, ಸುಜಾ ಕುಶಾಲಪ್ಪ, ರಾಬಿನ್ ದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಶಶಿ ಸುಬ್ರಮಣಿ, ಮಹೇಶ್ ಗಣಪತಿ, ರಘುನಾಣಯ್ಯ, ಬಿ.ರಾಜು, ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಯ ನಾಣಯ್ಯ, ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಅರುಣ್ ಭೀಮಯ್ಯ ಮತ್ತಿತರರು ಉಪಸ್ಥಿತರಿದ್ದರು. ದೇವಣಗೇರಿ ಹಾಗೂ ಚೆಂಬೆಬೆಳ್ಳೂರು ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.