ಕುಶಾಲನಗರ, ಅ. 6: ದೇಶದಲ್ಲಿ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಪುನರುಜ್ಜೀವನಗೊಳಿಸುವ ಗುರಿಯೊಂದಿಗೆ ವಿಶ್ವವಿದ್ಯಾನಿಲಯಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪದ್ಮಭೂಷಣ ಪುರಸ್ಕøತ ಪ್ರೊ. ಜಿ.ಪದ್ಮನಾಭನ್ ಕರೆ ನೀಡಿದ್ದಾರೆ.
ಅವರು ಅಳುವಾರ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಜೀವರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ಆಶ್ರಯದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ವಿಜ್ಞಾನ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳ ಶ್ರೀಮಂತ ದೇಶವಾಗಿದ್ದು ಯಾವದೇ ಭಾಗದಲ್ಲಿ ಸುಲಭವಾಗಿ ಲಭ್ಯವಾಗುತ್ತಿದೆ. ಈಗಾಗಲೆ ಗಿರಿಜನರು ಇದರ ಸಂಪೂರ್ಣ ಬಳಕೆ ಮಾಡುತ್ತಿದ್ದು ಅಧಿಕ ಪ್ರಮಾಣದ ಬಳಕೆ ಮಾಡುವಲ್ಲಿ ಪ್ರಯತ್ನವಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ರಾಷ್ಟ್ರದಲ್ಲಿ 21 ಸಾವಿರಕ್ಕೂ ಅಧಿಕ ಸಂಖ್ಯೆಯ ಔಷಧೀಯ ಗಿಡಗಳು ಬಳಕೆಯಲ್ಲಿದ್ದು ಆಯುರ್ವೇದ, ಯುನಾನಿ ಮುಂತಾದ ವೈದ್ಯಕೀಯ ರಂಗಗಳಲ್ಲಿ ಉಪಯೋಗಿಸಲಾಗುತ್ತಿದೆ. ಇಂತಹ ಸಮ್ಮೇಳನಗಳ ಮೂಲಕ ವಿದ್ಯಾರ್ಥಿಗಳು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಲ್.ಭೈರಪ್ಪ ಮಾತನಾಡಿ, ಸಮ್ಮೇಳನದಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಖ್ಯಾತ ವಿಜ್ಞಾನಿಗಳು ಪಾಲ್ಗೊಂಡಿದ್ದು ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದಿಂದ ರಚಿತ ಜೈವಿಕ ವಿಜ್ಞಾನದ ಪುಸ್ತಕದ ಬಿಡುಗಡೆ ನಡೆಯಿತು. ಇತ್ತೀಚೆಗೆ ಅಂತರ್ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಭೈರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪಿ.ಎಲ್.ಧರ್ಮ, ಡಾ.ಕೆ.ಕೆ.ಧರ್ಮಪ್ಪ ಇದ್ದರು.ಕಾರ್ಯಕ್ರಮ ಸಂಯೋಜಕರಾದ ಡಾ.ಕೆ.ಎಸ್.ಚಂದ್ರಶೇಖರಯ್ಯ ಸ್ವಾಗತಿಸಿದರು, ಸಂಚಾಲಕರಾದ ಡಾ.ಚಂದ್ರಶೇಖರ್ ಜಿ.ಜೋಷಿ ವಂದಿಸಿದರು.
ನಂತರ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿಜ್ಞಾನಿಗಳು ವಿವಿಧ ವಿಚಾರಗಳ ಬಗ್ಗೆ ವಿಷಯ ಮಂಡನೆ ನಡೆಯಿತು.