ಮಡಿಕೇರಿ, ಅ. 6: ಕೊಡಗಿನ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ತೆರಳುವ ರಸ್ತೆ ಅವ್ಯವಸ್ಥೆ ಬಗ್ಗೆ ‘ಶಕ್ತಿ’ ಗಮನ ಸೆಳೆದಿದ್ದ ವರದಿಗೆ ಸ್ಪಂದನದೊಂದಿಗೆ, ಜಿಲ್ಲಾ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಪ್ರಭು ಅವರು ಲಿಖಿತ ಪ್ರತಿಕ್ರಿಯೆಯೊಂದಿಗೆ ಮಳೆಗಾಲದ ಬಳಿಕ ರೂ. 428 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳುವದಾಗಿ ಮಾಹಿತಿ ನೀಡಿದ್ದಾರೆ.ಅಲ್ಲದೆ ಪ್ರಸಕ್ತ ತುಲಾ ಸಂಕ್ರಮಣ ಕಾವೇರಿ ಜಾತ್ರೆ ವೇಳೆಗೆ ನಾಡಿನ ಭಕ್ತರು ಹಾಗೂ ಯಾತ್ರಾರ್ಥಿಗಳಿಗೆ ತೊಂದರೆ ಆಗದಂತೆ ರೂ. 23 ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುವದು ಎಂದು ಸ್ಪಷ್ಟಪಡಿಸಿದ ಅವರು, ಈ ಸಾಲಿನಲ್ಲಿ ತಲಕಾವೇರಿ - ಭಾಗಮಂಡಲ ಕ್ಷೇತ್ರಕ್ಕೆ ತೆರಳಲು ಜಿಲ್ಲಾ ಕೇಂದ್ರದಿಂದ ಮತ್ತು ಇತರೆಡೆಗಳಿಂದ ಸಂಪರ್ಕ ರಸ್ತೆಗೆ ಕಾಯಕಲ್ಪಕ್ಕೆ ಹಣ ಬಿಡುಗಡೆಯಾಗಿದ್ದು, ಮಳೆಯಿಂದಾಗಿ ಕೆಲಸ ನಿಧಾನವಾಗಿದೆ ಎಂದು ಸಮಜಾಯಿಷಿಕೆ ನೀಡಿದರು.

ಪ್ರತಿಕ್ರಿಯೆ ಹೀಗಿದೆ

ಮಡಿಕೇರಿ ತಾಲೂಕಿನ ತಲಕಾವೇರಿ ತೀರ್ಥ ಪುಣ್ಯ ಕ್ಷೇತ್ರಕ್ಕೆ ಸಂಪರ್ಕಿಸುವ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಯುಂಟಾಗುತ್ತಿರುವ ರಸ್ತೆಗಳಲ್ಲಿರುವ ಗುಂಡಿಗಳ ಕುರಿತು ತಾ. 3 ರಂದು ಶಕ್ತಿ ದಿನಪತ್ರಿಕೆಯಲ್ಲಿ ವರದಿ ಪ್ರಸಾರವಾಗಿರುತ್ತದೆ. ಈ ವರದಿಗೆ ಸಂಬಂಧಿಸಿದಂತೆ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೊಡಗು ವಿಭಾಗ, ಮಡಿಕೇರಿ ಅವರು ಈ ಕೆಳಕಂಡಂತೆ ಸಮಜಾಯಿಷಿಕೆ ನೀಡಿರುತ್ತಾರೆ.

ಮಡಿಕೇರಿ - ಭಾಗಮಂಡಲ ರಸ್ತೆಯು ಜಿಲ್ಲಾಮುಖ್ಯ ರಸ್ತೆಯಾಗಿದ್ದು, ಸರಪಳಿ 0.00 ರಿಂದ 34.00ವರೆಗೆ ಒಟ್ಟಾರೆಯಾಗಿ 34.00 ಕಿ.ಮೀ. ಉದ್ದವನ್ನು ಹೊಂದಿರುತ್ತದೆ. ಈ ರಸ್ತೆಯ ಸರಪಳಿ 5.40 ರಿಂದ 10.50 ಕಿ.ಮೀ. ವರೆಗೆ ಹಾಗೂ 12.50 ರಿಂದ 14.00 ವರೆಗೆ ಹಾಗೂ ಕಿ.ಮೀ. 21.00 ರಿಂದ 22.00 ಕಿ.ಮೀ. ವರೆಗೆ ಒಟ್ಟು 7.60 ಕಿ.ಮೀ. ಉದ್ದ ಮರುಡಾಂಬರೀಕರಣ ಕಾಮಗಾರಿಗೆ 2017-18ನೇ ಸಾಲಿನ ಅಪೆಂಡಿಕ್ಸ್ - ಇ ಯೋಜನೆಯಲ್ಲಿ ಅಂದಾಜು ಮೊತ್ತ ರೂ. 200.00 ಲಕ್ಷಗಳಿಗೆ

(ಮೊದಲ ಪುಟದಿಂದ) ಅನುಮೋದನೆಗೊಂಡಿದ್ದು, ಪ್ರಸ್ತುತ ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಮಳೆಗಾಲದ ನಂತರ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗವದು.

ಮಡಿಕೇರಿ - ಭಾಗಮಂಡಲ ರಸ್ತೆಯ ಸರಪಳಿ 29.40 ರಲ್ಲಿ ಸೇತುವೆ ಪುನರ್ ನಿರ್ಮಾಣ ಮಾಡುವ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮಳೆಗಾಲದ ನಂತರ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವದು. ರೂ. 80.00 ಲಕ್ಷ ಈ ಬಾಬ್ತು ಬಿಡುಗಡೆಗೊಂಡಿದೆ. ಭಾಗಮಂಡಲ - ಕರಿಕೆ ರಸ್ತೆಯ ಸರಪಳಿ 6.00 ರಿಂದ 10.00 ಕಿ.ಮೀ. ವರೆಗೆ ಸಿಎಂಜಿಆರ್‍ವೈ ಲೆಕ್ಕ ಶೀರ್ಷಿಕೆ ಯೋಜನೆಯಡಿಯಲ್ಲಿ ಮರುಡಾಂಬರೀಕರಣ ಕಾಮಗಾರಿ ಹಾಗೂ ಉಳಿಕೆ ಭಾಗಗಳ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಈಗಾಗಲೇ ಅನುದಾನ ದೊರೆತಿದ್ದು, ಟೆಂಡರ್ ಕರೆಯಬೇಕಾಗಿರುತ್ತದೆ. ರೂ. 48 ಲಕ್ಷ ಹಣ ಒದಗಿಸಲಾಗುವದು. ಹುಣಸೂರು - ತಲಕಾವೇರಿ ರಾಜ್ಯ ಹೆದ್ದಾರಿಯ ಸರಪಳಿ 109.50 ರಿಂದ 113.50ವರೆಗೆ 2017-18ನೇ ಸಾಲಿನ ಅಪೆಂಡಿಕ್ಸ್ - ಇ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿ ಸಂಬಂಧಿಸಿದಂತೆ ಅನುದಾನ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮಳೆಗಾಲದ ನಂತರ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವದು. ಉಳಿಕೆ ಭಾಗಗಳ ಗುಂಡಿಮುಚ್ಚುವ ಕಾಮಗಾರಿಗಳಿಗೆ ಈಗಾಗಲೇ ಅನುದಾನ ದೊರೆತ್ತಿದ್ದು, ಟೆಂಡರ್ ಕರೆಯಬೇಕಾಗಿರುತ್ತದೆ. ರೂ. 100 ಲಕ್ಷ ಹಣ ಈಗಾಗಲೇ ಈ ಮಾರ್ಗಕ್ಕೆ ಬಿಡುಗಡೆಯಾಗಿದೆ.

ಮೇಲಿನ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವ ನಿರ್ವಹಣಾ ಕಾಮಗಾರಿಗಳಿಗೆ ಅನುದಾನವಿದ್ದು, ಟೆಂಡರ್ ಕರೆಯಬೇಕಾಗಿರುತ್ತದೆ. ಹಾಲಿ ಸರ್ಕಾರದ ಆದೇಶದನ್ವಯ ಕಾಮಗಾರಿಗಳ ಟೆಂಡರ್‍ಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಮೀಸಲು ಇಡುವ ಸಂಬಂಧ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿರುವದರಿಂದ ಮಾರ್ಗಸೂಚಿ ಅಂತಿಮಗೊಂಡ ತಕ್ಷಣ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಲಾಗುವದು. ಕೊಡಗು ಪ್ಯಾಕೇಜ್‍ನ ಅಡಿಯಲ್ಲಿ ಭಾಗಮಂಡಲ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮಳೆಗಾಲದ ನಂತರ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವದು ಎಂದು ಕಾರ್ಯಪಾಲಕ ಅಭಿಯಂತರರು ಲಿಖಿತವಾಗಿ ತಿಳಿಸಿದ್ದಾರೆ.