ಮಡಿಕೇರಿ ಅ. 6: ಮಾದಾಪುರ ಬಳಿ ಹಟ್ಟಿಹೊಳೆ ಮಾರ್ಗವಾಗಿ ಹಮ್ಮಿಯಾಲ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲಿರುವ ರಸ್ತೆ ಅಭಿವೃದ್ಧಿಗೆ ನಮ್ಮ ಗ್ರಾಮ - ನಮ್ಮ ರಸ್ತೆ ಯೋಜನೆಯಡಿ ರೂ. 10.50 ಕೋಟಿ ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ ಎಂದು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.ಗ್ರಾಮೀಣ ರಸ್ತೆ ಅವ್ಯವಸ್ಥೆ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಸಂಸದ ಪ್ರತಾಪ್ ಸಿಂಹ ಸ್ಪಂದನದಿಂದ ಈ ರಸ್ತೆಗೆ ವಿಶೇಷ ಅನುದಾನ ಲಭಿಸಿದ್ದು, ಮಳೆಗಾಲದ ಬಳಿಕ ಕಾಯಕಲ್ಪ ನೀಡಲಾಗುವದು ಎಂದು ಭರವಸೆ ನೀಡಿದರು.
ಅಲ್ಲದೆ ಮಕ್ಕಂದೂರು, ತಂತಿಪಾಲ ಮಾರ್ಗದ ರಸ್ತೆಗೆ ರೂ. 70 ಲಕ್ಷ ಮುಖ್ಯಮಂತ್ರಿಗಳ ನಿಧಿಯಿಂದ ಮಳೆ ಪರಿಹಾರ ನಿಧಿಯಿಂದ ರೂ. 50 ಲಕ್ಷ ಲಭಿಸಿದ್ದು, ಶೀಘ್ರ ದುರಸ್ತಿ ಕೈಗೊಳ್ಳಲಾಗುವದು ಎಂದರು.
ಈಗಾಗಲೇ ಜಿಲ್ಲಾಡಳಿತದಿಂದ ರೂ. 6 ಕೋಟಿ ಮಳೆ ಪರಿಹಾರ ನಿಧಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಮೇಲ್ಮನೆ ಸದಸ್ಯ ನಿಧಿ ರೂ. 2 ಕೋಟಿ ಅನುದಾನದಿಂದ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೈಗೊಂಡಿರುವದಾಗಿಯೂ ಅವರು ವಿವರಿಸಿದರು.
ಪ್ರಸಕ್ತ ಸಾಲಿನ ಅನುದಾನ ಹಾಗೂ ಮಳೆ ಪರಿಹಾರ ನಿಧಿಯಿಂದ ಇನ್ನಷ್ಟು ಕೆಲಸ ಕೈಗೊಳ್ಳುವ ಭರವಸೆ ನೀಡಿರುವ ವೀಣಾ ಅಚ್ಚಯ್ಯ, ಜಿಲ್ಲೆಯ ರಸ್ತೆಗಳು ಮಳೆಯಿಂದಾಗಿ ಸಾಕಷ್ಟು ಹಾಳಾಗಿರುವ ಬಗ್ಗೆ ನಿತ್ಯ ಸಾರ್ವಜನಿಕ ದೂರುಗಳು ಬರುತ್ತಿದ್ದು, ಹಂತ ಹಂತವಾಗಿ ಸರಕಾರದ ಗಮನ ಸೆಳೆದು ದುರಸ್ತಿ ಮಾಡಿಸುವದಾಗಿ ನುಡಿದರು.
ತುಲಾ ಸಂಕ್ರಮಣ ಕಾವೇರಿ ಜಾತ್ರೆಗೆ ಮುನ್ನ ಮಡಿಕೇರಿ - ಭಾಗಮಂಡಲ ಮಾರ್ಗದ ಕಾಡು ಕಡಿಸಿ ಗುಂಡಿ ಮುಚ್ಚಿಸಲು ಲೋಕೋಪಯೋಗಿ ಇಲಾಖೆಗೆ ಈಗಾಗಲೇ ಸೂಚಿಸಿರುವದಾಗಿ ಮಾಹಿತಿ ನೀಡಿದರು.
ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದ್ದು, ತುಲಾ ಸಂಕ್ರಮಣ ಜಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಯಾತ್ರಿಕರು ಬರುವ ನಿರೀಕ್ಷೆಯೊಂದಿಗೆ ಜಿಲ್ಲಾಡಳಿತ ಮತ್ತು ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ಸಕಲ ತಯಾರಿ ಮಾಡಿಕೊಳ್ಳುವ ಅಗತ್ಯವಿದೆಯೆಂದು ಅವರು ನುಡಿದರು.