ಮಡಿಕೇರಿ, ಅ. 7: ಹಿರಿಯ ನಾಗರಿಕರ ವೇದಿಕೆಯ ಸಭೆ ನಗರದ ನಾರ್ತ್ ಕೂರ್ಗ್ ಕ್ಲಬ್‍ನಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಎಂ.ಸಿ. ನಾಣಯ್ಯ, ಹಿರಿಯ ನಾಗರಿಕರ ವೇದಿಕೆಗೆ ಸ್ವಂತ ಜಾಗ ಪಡೆಯಲು ಹಲವು ಸಮಯದಿಂದ ಪ್ರಯತ್ನಿಸುತ್ತಿದ್ದರೂ ಜಿಲ್ಲಾಡಳಿತ ನೂರೆಂಟು ಸಬೂಬುಗಳನ್ನು ಹೇಳಿ ಕಡತಗಳನ್ನು ಬಾಕಿ ಉಳಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೃದ್ಯಾಪ್ಯವನ್ನು ಅಸಡ್ಡೆಯಾಗಿ ಸ್ವೀಕರಿಸಬಾರದೆಂದು ಕಿವಿಮಾತು ಹೇಳಿದ ಅವರು, ಹಿರಿಯರನ್ನು ನೋಡಿಕೊಳ್ಳುವದರ ಮೇಲೆ ಮಕ್ಕಳ ಮುಂದಿನ ಭವಿಷ್ಯ ಅಡಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬ ನಾಗರಿಕನೂ ಪ್ರಜ್ಞಾವಂತನಾಗಿರಬೇಕು, ಜಾತಿಪದ್ಧತಿ, ಬಡತನ ನಿರ್ಮೂಲನೆ, ಪರಸ್ಪರ ಗೌರವ ನೀಡುವದು ಮತ್ತಿತರ 13 ನಿಯಮಗಳಿಗೆ ಬದ್ಧರಾಗಿರು ತ್ತೇವೆಂದು ಸಭೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕರಾದ ನಾಗೇಶ್ ಕಾಲೂರು, ಕ್ರೀಡಾ ಕ್ಷೇತ್ರದ ಸಾಧಕರಾದ ಪೆಮ್ಮಂಡ ಅಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ನಿಧನರಾದ ವೇದಿಕೆ ಸದಸ್ಯರು ಹಾಗೂ ವೀರಯೋಧರಿಗೆ ಸಂತಾಪ ಸೂಚಿಸಲಾಯಿತು.

ಸಭೆಯ ಆರಂಭಕ್ಕೂ ಮುನ್ನ ನಗರದ ಯುದ್ಧ ಸ್ಮಾರಕದವರೆಗೆ ಮೆರವಣಿಗೆ ಸಾಗಿದ ವೇದಿಕೆ ಪದಾಧಿಕಾರಿಗಳು, ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಮರ್ಪಿಸಿದರು.

ಹಿರಿಯ ನಾಗರಿಕರ ವೇದಿಕೆಯ ಪ್ರಮುಖರಾದ ತಿಮ್ಮಯ್ಯ, ಅರವಿಂದ ಅಪ್ಪಣ್ಣ, ಸುಮತಿ, ಲೀಲಾ ಚಿಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.