ಶ್ರೀಮಂಗಲ, ಅ. 8: ವಿಯೆಟ್ನಾಂ ದೇಶದ ಕಳಪೆ ಕರಿಮೆಣಸು ಭಾರತಕ್ಕೆ ಆಮದು ಮೂಲಕ ಪ್ರವೇಶವಾಗುತ್ತಿರುವದರಿಂದ ದೇಶಿಯ ಕರಿಮೆಣಸು ಮಾರುಕಟ್ಟೆ ತೀವ್ರವಾಗಿ ಕುಸಿತ ಕಂಡಿದೆ. ಇದರ ಪರಿಹಾರಕ್ಕೆ ಕರಿಮೆಣಸು ಆಮದನ್ನು ನಿರ್ಬಂಧಿಸುವ ಮೂಲಕ ರಾಜ್ಯದ ಕರಿಮೆಣಸು ಬೆಳೆಗಾರರ ಹಿತಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಬೆಳೆಗಾರರ ನಿಯೋಗಕ್ಕೆ ಭರವಸೆ ನೀಡಿದರು.ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ಕೃಷ್ಣಾದಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮೂಲಕ ಕೊಡಗು ಬೆಳೆಗಾರರ ಒಕ್ಕೂಟದ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ವಿಯೆಟ್ನಾಂ ಕರಿಮೆಣಸು ಆಮದು ನಿರ್ಬಂಧಿಸಲು ಹಾಗೂ ಗೋಣಿಕೊಪ್ಪ ಎಪಿಎಂಸಿಯಲ್ಲಿ ಅವ್ಯವಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ ಸಂದರ್ಭ ಈ ಭರವಸೆ ನೀಡಿದರು.

ಕರಿಮೆಣಸು ಆಮದನ್ನು ನಿರ್ಬಂಧಿಸಲು ಮುಂದಾಗುವಂತೆ ಆಗ್ರಹಿಸಿ, ಕೇಂದ್ರ ವಾಣಿಜ್ಯ ಸಚಿವರಿಗೆ ಪತ್ರ ಬರೆಯಲಾಗುವದು. ಗೋಣಿಕೊಪ್ಪ ಎಪಿಎಂಸಿಯಲ್ಲಿ ಕಲಬೆರಕೆ ಪ್ರಕರಣದ ಬಗ್ಗೆ ಈಗಾಗಲೇ ಕೃಷಿ ಮಾರಾಟ ಸಚಿವರು, ಕೃಷಿ ಮಾರಾಟ ಇಲಾಖೆ ವತಿಯಿಂದ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ದಾಖಲಾಗಿರುವ

(ಮೊದಲ ಪುಟದಿಂದ) ದೂರಿನ ಹಿನ್ನೆಲೆಯಲ್ಲಿ ಎಸಿಬಿಯಿಂದಲೂ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಹೆಚ್ಚುವರಿ ಅಡ್ವಕೆಟ್ ಜನರಲ್ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರನ್ನು ನಿಯೋಗ ಭೇಟಿ ಮಾಡಿ ಇದೇ ಸಂದರ್ಭ ಕಾನೂನು ಹೋರಾಟದ ಬಗ್ಗೆ ಚರ್ಚಿಸಿತು. ಈ ಸಂದರ್ಭ ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿ ತುಷಾರ್ ಅವರನ್ನು ಸಂಪರ್ಕಿಸಿ ವಿಯೆಟ್ನಾಂ ಕರಿಮೆಣಸು ಆಮದು ಹಾಗೂ ಗೋಣಿಕೊಪ್ಪ ಎಪಿಎಂಸಿಯಲ್ಲಿ ಕರಿಮೆಣಸು ಕಲಬೆರಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೆಳೆಗಾರರ ಹಿತಕಾಪಾಡಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ಗಮನ ಸೆಳೆದರು.

ಈ ಸಂದರ್ಭ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬೀಲಿರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಹಾಜರಿದ್ದರು.