ಸೋಮವಾರಪೇಟೆ, ಅ. 8: ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿ ಯಂತ್ರೋಪಕರಣ ಮತ್ತು ಕೃಷಿ ಪರಿಕರಗಳ ಬಿಡಿ ಭಾಗಗಳಿಗೂ ಜಿಎಸ್‍ಟಿ ವಿಧಿಸುತ್ತಿರುವದು ಖಂಡನೀಯವಾಗಿದ್ದು, ತಕ್ಷಣ ಇವುಗಳನ್ನು ಜಿಎಸ್‍ಟಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ ಜಿಲ್ಲಾ ವಕ್ತಾರ ಹೆಚ್.ಸಿ. ನಾಗೇಶ್, ತಪ್ಪಿದಲ್ಲಿ ಜಿಲ್ಲಾದ್ಯಂತ ಹೋರಾಟ ಸಂಘಟಿಸಲಾಗುವದು ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೈತರು ಖರೀದಿಸುವ ಎಲ್ಲಾ ಯಂತ್ರೋಪಕರಣಗಳು ಹಾಗೂ ಕೃಷಿ ಸಲಕರಣೆಗಳಿಗೆ ಜಿಎಸ್‍ಟಿ ನೆಪದಲ್ಲಿ ಅಧಿಕ ತೆರಿಗೆ ವಿಧಿಸುತ್ತಿರುವದು ಸಮಂಜಸವಲ್ಲ. ಸಲಕರಣೆಗಳ ರಿಪೇರಿಗೂ ಜಿಎಸ್‍ಟಿ ವಿಧಿಸುತ್ತಿರುವ ಕ್ರಮ ಖಂಡನೀಯ. ಕೇಂದ್ರ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದದ್ದೇ ಆದಲ್ಲಿ ತಕ್ಷಣ ಇವುಗಳನ್ನು ತೆರಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ಪತ್ರ ಬರೆಯಲಾಗಿದ್ದು, ಕೃಷಿ ಯಂತ್ರೋಪಕರಣಗಳನ್ನು ಜಿಎಸ್‍ಟಿಯಿಂದ ಮುಕ್ತಗೊಳಿಸದಿದ್ದಲ್ಲಿ ಜಿಲ್ಲೆಯಿಂದಲೇ ಹೋರಾಟಕ್ಕೆ ಚಾಲನೆ ನೀಡಲಾಗುವದು. ಪ್ರತಿ ಗ್ರಾಮದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.