ಸೋಮವಾರಪೇಟೆ,ಅ.8: ಬಡತನದಲ್ಲಿಯೇ ಓದಿ, ಕೆಲವೊಮ್ಮೆ ಹಸಿವಿನಿಂದ ಕಳೆದರೂ ಓದಿನ ಹಸಿವು ಮಾತ್ರ ಇಂಗಿರಲಿಲ್ಲ. ಚಿಕ್ಕಂದಿನಿಂದಲೇ ಪಾಠ ಪ್ರವಚನವನ್ನು ಶ್ರದ್ಧೆಯಿಂದ ಓದಿದ ಫಲವಾಗಿ ಇಂದು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ.

ಸರ್ಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡಿ ಇಂದು ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಗೇರಿರುವ ಪಿ. ಲಕ್ಷ್ಮೀ ಅವರು ಕುಶಾಲನಗರದ ಅಂಬೇಡ್ಕರ್ ಬಡಾವಣೆಯ ನಿವಾಸಿಗಳಾದ ಪುಟ್ಟಯ್ಯ ಮತ್ತು ಸುಶೀಲ ದಂಪತಿಯ ಪ್ರಥಮ ಪುತ್ರಿ ಲಕ್ಷ್ಮೀ, 2014ರ ಗೆಜೆಟೆಡ್ ಪ್ರೊಬೇಷನರ್‍ನ ಕೆಎಎಸ್ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ಕರ್ನಾಟಕ ಸಾಮಾನ್ಯ ಸೇವೆಯ ವೃಂದ-ಎ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಇ.ಓ.) ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಕರ್ನಾಟಕ ಸರ್ಕಾರದ ಸಚಿವಾಲಯ, ಆರ್‍ಡಿಪಿಆರ್ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಮುಂದಿನ 5 ತಿಂಗಳ ತರಬೇತಿ ನಂತರ ಯಾವದಾದರೊಂದು ತಾಲೂಕಿಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಾಗಿ ಸಾರ್ವಜನಿಕ ಸೇವಾ ಕ್ಷೇತ್ರಕ್ಕೆ ಅಡಿಯಿಡಲಿದ್ದಾರೆ.

ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಮತ್ತು ಕಾಲೇಜು ಶಿಕ್ಷಣ, ಕೂಡಿಗೆ ಡಯಟ್‍ನಲ್ಲಿ ಡಿ.ಇಡಿ ವ್ಯಾಸಂಗ ಮಾಡಿದ ಲಕ್ಷ್ಮೀ ಅವರು, 2007ರಲ್ಲಿ ಸೋಮವಾರಪೇಟೆ ತಾಲೂಕಿನ ದೊಡ್ಡಭಂಡಾರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡರು. ನಂತರ ಶನಿವಾರಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಪಾಠಪ್ರವಚನ ಮಾಡಿದ ಇವರು 2016ರಲ್ಲಿ ಸೋಮವಾರಪೇಟೆ ಕ್ಲಸ್ಟರ್‍ನ ಸಿಆರ್‍ಪಿಆಗಿ ನೇಮಕಗೊಂಡು ಸೇವೆ ಸಲ್ಲಿಸಿದರು.

ವೃತ್ತಿಯ ಜತೆಯಲ್ಲೇ ದೂರಶಿಕ್ಷಣದ ಮೂಲಕ ಬಿ.ಎ., ಬಿ.ಇಡಿ ನಂತರ ಎಂ.ಎ. ರಾಜ್ಯಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದರು. ಈ ಮಧ್ಯೆ 2011ರ ಗೆಜೆಟೆಡ್ ಪ್ರೊಬೇಷನರ್ (ಕೆಎಎಸ್)ನಲ್ಲಿ ತೇರ್ಗಡೆಗೊಂಡು ವಾಣಿಜ್ಯ ತೆರಿಗೆ ಅಧಿಕಾರಿ ವೃಂದ-ಬಿ ಆಗಿ ಆಯ್ಕೆಯಾಗಿದ್ದರು. ಆ ಸಂದರ್ಭ ಸೇವೆಗೆ ತೆರಳದೇ ವೃಂದ -1 ಅಧಿಕಾರಿಯಾಗಲೇ ಬೇಕೆಂಬ ಹಠಕ್ಕೆ ಬಿದ್ದು, 2014ರ ಗೆಜೆಟೆಡ್ ಪ್ರೊಬೇಷನರ್‍ನಲ್ಲಿ ಎರಡನೇ ಬಾರಿಗೆ ಕೆಎಎಸ್ ಪರೀಕ್ಷೆ ಬರೆದು ಉತ್ತಮ ರ್ಯಾಂಕ್ ಮೂಲಕ ತೇರ್ಗಡೆಗೊಂಡು ಇದೀಗ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಾಗುವ ಮೂಲಕ ಕ್ಲಾಸ್-1 ಆಫೀಸರ್ ಆಗಿದ್ದಾರೆ.

ಇದೇ ಮೊದಲ ಬಾರಿಗೆ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇರ ನೇಮಕಾತಿ ನಡೆದಿದ್ದು, ಇದರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ತಾ.ಪಂ. ಇ.ಓ. ಆಗಿ ನೇಮಕಗೊಂಡಿದ್ದಾರೆ.

-ವಿಜಯ್ ಹಾನಗಲ್