ಮಡಿಕೇರಿ, ಅ.8: ಕೆಲವೊಂದು ಕಾಮಗಾರಿಗಳು ವೇಗವಾಗಿ ಆರಂಭ ಗೊಂಡು ನಂತರ ನಿಧಾನವಾಗಿ ಸಾಗುತ್ತದೆ. ಆದರೆ ಮಡಿಕೇರಿಯ ಹೈಟೆಕ್ ಮಾರುಕಟ್ಟೆ ಕಾಮಗಾರಿ ನಿಧಾನವಾಗಿ ಆರಂಭಗೊಂಡು ಇದೀಗ ಕೋಮಾ ಸ್ಥಿತಿಗೆ ಜಾರಿದೆ.ಕಳೆ ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡಿರುವ ಕಾಮಗಾರಿ ಸದ್ದಿಲ್ಲದೆ ಮಲಗಿತ್ತು. ನಂತರದಲ್ಲಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಗುತ್ತಿಗೆದಾರರ ಮನವೋಲಿಸಿ ಕಾಮಗಾರಿಗೆ ಮರು ಚಾಲನೆ ಸಿಕ್ಕಿತ್ತಾದರೂ, ಮತ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿತು. ಮೇಲಂತಸ್ತು ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ತಗಲುವದರಿಂದ ಹಣ ದೊರಕದೆ ಕಾಮಗಾರಿ ಆರಂಭಿಸುವದಿಲ್ಲವೆಂದು ಗುತ್ತಿಗೆದಾರ ಕೈಕಟ್ಟಿ ಕುಳಿತುಬಿಟ್ಟಿದ್ದ. ಕಟ್ಟಡ ನಿರ್ಮಾಣಕ್ಕೆ ಬಳಸಿದ್ದ ಸೆಂಟ್ರ್ರಿಂಗ್ ಕಂಬಗಳನ್ನು ಕೂಡ ಬಿಚ್ಚಿರಲಿಲ್ಲ.
ಈ ಬಗ್ಗೆ ‘ಶಕ್ತಿ’ ವರದಿ ಮಾಡಿದ ಬೆನ್ನಲ್ಲೇ ಎಸ್.ಡಿ.ಪಿ.ಐ. ಸಂಘಟನೆ ಮಾರುಕಟ್ಟೆ ವ್ಯಾಪಾರಿಗಳ ಸಂಘ ಹಾಗೂ ಸಾರ್ವಜನಿಕರು ಸೇರಿ ಪ್ರತಿಭಟನೆ ನಡೆಸಿದ್ದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ್ದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಆಯುಕ್ತೆ ಶುಭ ಅವರು ಗುತ್ತಿಗೆದಾರರನ್ನು ಕರೆಸಿ, ಮಾತುಕತೆ ಮಾಡಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದರಲ್ಲದೆ, ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಿಕೊಡುವ ಭರವಸೆ ನೀಡಿದ್ದರು.
ಭರವಸೆ ನೀಡಿ ಈಗಾಗಲೇ 20 ದಿನಗಳು ಕಳೆದಿವೆ. ಗುತ್ತಿಗೆದಾರ ಸೆಂಟ್ರಿಂಗ್ ಕಂಬಗಳನ್ನು ಮಾತ್ರ ಬಿಚ್ಚಿಟ್ಟಿದ್ದಾರೆ. ರೂ. 4 ಕೋಟಿ ಮೊತ್ತದ ದೊಡ್ಡ ಪ್ರಮಾಣದ ಹೈಟೆಕ್ ಮಾರುಕಟ್ಟೆ ಕೆಲಸವನ್ನು ನಾಲ್ಕೈದು ಮಹಿಳೆಯರು, ಒಂದೆರಡು ಪುರುಷರು ಮಾಡುತ್ತಿರುವದು ಕಂಡುಬಂದಿದೆ. ‘ಬೇಕೋ ಬೇಡವೋ’ ಎಂಬಂತೆ ರಸ್ತೆ ಬದಿ ಸುರಿದಿರುವ ಜಲ್ಲಿ ಕಲ್ಲುಗಳನ್ನು ಒಳಗಡೆ ಕೊಂಡೊಯ್ದು ಅದೇನೋ ಕೆಲಸ ಮಾಡುತ್ತಿರುವದು ಕಾಣ ಬರುತ್ತಿದೆ. ಹೀಗೆ ಕೆಲಸ ಮಾಡಿದರೆ ಇನ್ನೂ ಎರಡು ವರ್ಷವಾದರೂ ಇದು ಪೂರ್ಣಗೊಳ್ಳುವ ಯಾವದೇ ಸೂಚನೆ ಕಾಣುತ್ತಿಲ್ಲವೆಂಬದು ಮಾರುಕಟ್ಟೆ ವ್ಯಾಪಾರಿಗಳ ಅಂಬೋಣ. ಕೆಲಸ ‘ಸತ್ತು’ ಹೋಗಿದೆ ಎಂದು ಅವರುಗಳು ಹೇಳುತ್ತಾರೆ. ನಗರಸಭೆ ಆಡಳಿತದವರಿ ಗಂತೂ ಚುರುಕು ಮುಟ್ಟಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳಾದರೂ ಇತ್ತ ಗಮನ ಹರಿಸಿ ಈ ವರ್ಷದೊಳಗಡೆಯಾದರೂ, ಮುಗಿಸಿ ಕೊಡಲಿ ಎಂದು ವ್ಯಾಪಾರಿಗಳು ಅವಲತ್ತುಕೊಂಡಿದ್ದಾರೆ.- ಸಂತೋಷ್