ಸೋಮವಾರಪೇಟೆ, ಅ. 8: ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ಸೋಮವಾರಪೇಟೆಯಲ್ಲಿ ವಿಜೃಂಭಣೆಯಿಂದ ಓಣಂ ಉತ್ಸವ ಆಚರಿಸಲಾಯಿತು. ಸಾವಿರಾರು ಮಂದಿ ಮಲೆಯಾಳಿ ಸಮಾಜ ಬಾಂಧವರು ನಗರದಲ್ಲಿ ಓಣಂ ಮೆರವಣಿಗೆ ನಡೆಸಿ ಕಾರ್ಯಕ್ರಮಕ್ಕೆ ಕಳೆ ತುಂಬಿದರು.ಇಲ್ಲಿನ ಮುತ್ತಪ್ಪ ಸ್ವಾಮಿ ದೇವಾಲಯದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಸಮುದಾಯ ಬಾಂಧವರು ಭಾಗವಹಿಸಿದ್ದರು. ಮಹಿಳಾ ತಂಡದಿಂದ ಮೂಡಿಬಂದ ಚಂಡೆಮೇಳ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.ನಂತರ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಎರಡನೇ ವರ್ಷದ ಓಣಂ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಮೂಡಿಬಂದ ಭರತನಾಟ್ಯ ಮತ್ತು ಕೇರಳದ ತಿರುವಾದಿರ ವಿಶೇಷ ನೃತ್ಯ ಪ್ರಾಕಾರಗಳು ಆಕರ್ಷಣೀಯವಾಗಿತ್ತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಮಲೆಯಾಳಿ ಬಾಂಧವರ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ. 10 ಲಕ್ಷ ಅನುದಾನ ನೀಡಲಾಗುವದು. ಇದರೊಂದಿಗೆ ವೈಯಕ್ತಿಕವಾಗಿಯೂ ನೆರವು ನೀಡಲಾಗುವದು ಎಂದರು.

ಸಮುದಾಯದಲ್ಲಿ ಒಗ್ಗಟ್ಟು ಮುಖ್ಯ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳು ವಿದ್ಯಾವಂತ ರಾದರೆ ಸಮುದಾಯ ಅಭಿವೃದ್ಧಿ ಕಾಣುತ್ತದೆ. ಸಮುದಾಯದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.