ಮಡಿಕೇರಿ, ಅ. 8: ಶಿಕ್ಷಣದ ಮೂಲಕ ಪ್ರತಿಭೆಗಳನ್ನು ಅರಳಿಸುವ ಕಾರ್ಯವಾಗಬೇಕಿದ್ದು, ಈ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ಪಟ್ಟರು.ಕೊಡಗು ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ಇಂದು ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜ ಅಭಿವೃದ್ಧಿ ಸಾಧಿಸಲಿ ಎಂಬ ಕಾರಣಕ್ಕೆ ನಮ್ಮ ಹಿರಿಯರು ಶತಮಾನಗಳ ಹಿಂದೆಯೇ ಗೌಡ ವಿದ್ಯಾಸಂಘವನ್ನು ಸ್ಥಾಪಿಸಿದ್ದರು. ಇಂದು ಸಮಾಜದಲ್ಲಿ ಆರ್ಥಿಕ ಪರಿಸ್ಥಿತಿ ಬದಲಾಗಿದೆ. ಸರಕಾರ ಕೂಡ ಶಿಕ್ಷಣಕ್ಕಾಗಿ ಹಲವು ಕಾರ್ಯಕ್ರಮ ಗಳನ್ನು ನಿರಂತರವಾಗಿ ಹಮ್ಮಿಕೊಂಡು ಪ್ರತಿಭಾನ್ವಿತರಿಗಾಗಿಯೇ ಹಲವು ಕಾರ್ಯಕ್ರಮ ಏರ್ಪಡಿಸಿದೆ. ಶಿಕ್ಷಣ ಪಡೆಯುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತರಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜ, ಶಿಕ್ಷಕರು ಹಾಗೂ ಪೋಷಕರು ಚಿಂತನೆ ನಡೆಸುವ ಅಗತ್ಯವಿದೆ ಎಂದರು.

ವಿದ್ಯಾಸಂಘದ ವತಿಯಿಂದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಚಿಂತನೆಯನ್ನು ಸಮಾಜ ಹೊಂದಿದೆ. ಇದಕ್ಕಾಗಿ ಹಲವು ಸಮಯದಿಂದ ನಿರಂತರವಾಗಿ ಶ್ರಮಿಸುತ್ತಿದೆ. ಆದರೆ ಹಲವು ಅಡೆತಡೆಗಳಿಂದ ಈ ಕಾರ್ಯಕ್ಕೆ ಕೊಂಚ ಹಿಂದೇಟು ಬಿದ್ದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಗಮನ ನೀಡಿ, ಶಿಕ್ಷಣ ಸಂಸ್ಥೆಯತ್ತ ಚಿತ್ತ ಹರಿಸಲಾಗುವದು ಎಂದು ಶಾಸಕರು ಭರವಸೆ ನೀಡಿದರು.

ವಿದ್ಯಾಸಂಘ ತನ್ನ ಮೂಲ ಉದ್ದೇಶಕ್ಕೆ ಪೂರಕವಾಗಿ ಕೆಲಸ ನಿರ್ವಹಿಸುವಂತೆ ಆಗಬೇಕು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚುಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳುದರ ಮೂಲಕ ಪ್ರತಿಭೆಗಳನ್ನು ಸಮಾಜಕ್ಕೆ ಕೊಡುಗೆ ನೀಡುವಂತೆ ಆಗಲಿ ಎಂದು ಶುಭ ಹಾರೈಸಿದರು.

ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪೊನ್ನಚ್ಚನ ಜಿ. ಸೋಮಣ್ಣ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಪ್ರತಿಯೊಬ್ಬರು ವಿದ್ಯಾನಿಧಿಗೆ ಅನುದಾನ ನೀಡುದರ ಮೂಲಕ ಪ್ರತಿಭೆಗಳನ್ನು ಬೆಳಕಿಗೆ ತರಲು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಹಾಕತ್ತೂರು ತೊಂಭತ್ತುಮನೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ತಳೂರು ಪ್ರಭಾವತಿ ಬಾಲಕೃಷ್ಣ ಮಾತನಾಡಿ,

(ಮೊದಲ ಪುಟದಿಂದ) ಕದಿಯಲಾಗದ ಸಂಪತ್ತು ವಿದ್ಯೆಯಾಗಿದ್ದು, ವಿದ್ಯೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಕೊಂಡೊಯ್ಯಲು ಸಹಕಾರಿ. ಇಂತಹ ಕಾರ್ಯಕ್ರಮದಿಂದ ಮತ್ತಷ್ಟು ಪ್ರತಿಭೆಗಳನ್ನು ಸಮಾಜ ಗುರುತಿಸಬಲ್ಲದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಕುಗ್ರಾಮದಿಂದ ಹಿಡಿದು ಎಲ್ಲರಿಗೂ ವಿದ್ಯೆ ದೊರೆಯಬೇಕು ಎಂಬ ಅಭಿಲಾಸೆಯನ್ನು ಸಂಸ್ಥೆ ಹೊಂದಿದ್ದು, ವಿದ್ಯೆಯೊಂದಿಗೆ ಇತರೆ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತೊಡಗಿಕೊಂಡರೆ ಅವರು ಪರಿಪೂರ್ಣರಾಗುತ್ತಾರೆ. ಸಾಂಸ್ಕøತಿಕ ಹಾಗೂ ಕ್ರೀಡಾಕ್ಷೇತ್ರದತ್ತಲೂ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.

ನಿವೃತ್ತ ಶಿರಸ್ತೇದಾರ ಕಲ್ಲೆಂಬಿ ಡಾಲು ಮಾತನಾಡಿದರು. ಇದೇ ಸಂದರ್ಭ ಹತ್ತನೆ ತರಗತಿ, ಪಿಯುಸಿ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸ್ವಾತಂತ್ಯ ದಿನಾಚರಣೆ ಅಂಗವಾಗಿ ಕೊಡಗು ಗೌಡ ವಿದ್ಯಾಸಂಘದಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಛದ್ಮವೇಷ ಸ್ಪರ್ಧೆಯಲ್ಲಿ ಕಾಳೇರಮ್ಮನ ಲಕ್ಷ್ಮಣ ಅಶೋಕ್ (ಪ್ರ), ಯಶಸ್ ಗೌಡ (ದ್ವಿ), ವನ್ಯಶ್ರೀ (ತೃ), ಏಕ ಪಾತ್ರ ಅಭಿನಯದಲ್ಲಿ ಕಟ್ಟೆಮನೆ ಜಾಹ್ನವಿ ಸೋನಜಿತ್ (ಪ್ರ), ಚೆರಿಯಮನೆ ಪ್ರೀತಮ್ ಚಿಣ್ಣಪ್ಪ (ದ್ವಿ), ಅಂಚೆಮನೆ ಕುಶನ್ ಲೋಕೇಶ್(ತೃ) ಬಹುಮಾನ ಪಡೆದರು.

ಭಾಷಣ ಸ್ಪರ್ಧೆಯಲ್ಲಿ ಕರ್ಣಯನ ಸುರ್ಪಿತಾ ಮಧು (ಪ್ರ), ಕಟ್ಟೆಮನೆ ಜಾಗೃತಿ ಸೋನಜಿತ್ (ದ್ವಿ), ಕುದುಕುಳಿ ಲವೀನ್ ರಮೇಶ್ ಹಾಗೂ ಕುಂಚಡ್ಕ ಶಾನುಪ್ರಕಾಶ್ (ತೃ) ಬಹುಮಾನ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಬಾಕಿಲನ ಧ್ರುವ ನಂಜಪ್ಪ (ಪ್ರ), ಪಾಣತ್ತಲೆ ಮಯೂರಿ (ದ್ವಿ), ಕುಲ್ಲಚೆಟ್ಟಿ ಧನ್ಯಶ್ರೀ (ತೃ) ಬಹುಮಾನ ಪಡೆದರು.