ಮೂರ್ನಾಡು, ಅ.8 : ಮಹಾನ್ ವ್ಯಕ್ತಿಗಳ ಸಿದ್ದಾಂತ, ತತ್ವಗಳು ಕೇವಲ ಆಚರಣೆಗೆ ಸೀಮಿತವಾಗದೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೂರ್ನಾಡು ವಿದ್ಯಾಸಂಸ್ಥೆ ಪ್ರೌಢಶಾಲೆ ಶಿಕ್ಷಕ ಎಸ್.ಡಿ. ಪ್ರಶಾಂತ್ ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ವಿಶೇಷ ವಾರ್ಷಿಕ ಶಿಬಿರದಲ್ಲಿ ಸೇವಾ ಮನೋಭಾವನೆ ಬೆಳೆಸುವಲ್ಲಿ ಗಾಂಧಿ ತತ್ವ ಕುರಿತು ಅವರು ಉಪನ್ಯಾಸ ನೀಡಿದರು. ಗಾಂಧೀಜಿ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಈ. ದಿವಾಕರ್ ಗಾಂಧಿ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಶಿಬಿರ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವಂತೆ ಕರೆನೀಡಿದರು.
ಹಾಕತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ವಿಷ್ಣುಕುಮಾರ್ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಹಾಕತ್ತೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಮಚಂದ್ರ, ಎಸ್‍ಡಿಎಂಸಿ ಅಧ್ಯಕ್ಷ ಅಬೂಬ್ಬಕ್ಕರ್, ಕಾಫಿ ಬೆಳೆಗಾರ ಬಲ್ಯಾಟನ ರಮೇಶ್, ಮೂರ್ನಾಡು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಮಂಜುನಾಥ್, ಎನ್‍ಸಿಸಿ ಕಾರ್ಯಕ್ರಮಾಧಿಕಾರಿ ಯು.ಸಿ. ಮಾಲತಿ, ಹಾಕತ್ತೂರು ಪ್ರೌಢಶಾಲಾ ಶಿಕ್ಷಕರಾದ ವನಜ, ಜಯಂತಿ, ಮುನೀರ್, ಸಹನಾ, ಭವಾನಿ ಶಂಕರ್, ಪಾರ್ವತಿ ಉಪಸ್ಥಿತರಿದ್ದರು.
ಗಾಂಧಿ ಜಯಂತಿ ಅಂಗವಾಗಿ ಶಿಬಿರಾರ್ಥಿಗಳು, ಹಾಕತ್ತೂರು ಪ್ರೌಢಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.