ಸುಂಟಿಕೊಪ್ಪ, ಅ. 8: ಸುಂಟಿಕೊಪ್ಪದಲ್ಲಿ ಸಂಜೆ ವೇಳೆ ಅತೀ ವೇಗವಾಗಿ ಮೋಟಾರ್ ಬೈಕ್ ಚಾಲಿಸುತ್ತಾ ಶಾಲಾ ಮಕ್ಕಳಿಗೆ, ಪಾದಚಾರಿಗಳಿಗೆ ಭಯ ಸೃಷ್ಟಿಸುತ್ತಿರುವವರ ವಿರುದ್ಧ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂಜೆ ಸುಂಟಿಕೊಪ್ಪದಲ್ಲಿ ದ್ವಿಚಕ್ರ ವಾಹನಗಳ ಸಂಚಾರ ಅಧಿಕವಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ದಾಖಲಾತಿಗಳ ದ್ವಿಚಕ್ರ ವಾಹನಗಳ ಓಡಾಟ ಕಂಡು ಬರುತ್ತಿದೆ. ಅತೀ ವೇಗವಾಗಿ ದ್ವಿಚಕ್ರ ವಾಹನ ಓಡಿಸುವದು ಕೆಲ ಮಂದಿಗೆ ಶೋಕಿಯಾಗಿದೆ.
ಸುಂಟಿಕೊಪ್ಪ ಮಾರುಕಟ್ಟೆ ಬಳಿಯ ಗಲ್ಲಿ, ಸರಕಾರಿ ಕಚೇರಿ, ಸರಕಾರಿ ಶಾಲಾ-ಕಾಲೇಜು ಆವರಣಗಳಲ್ಲಿ ಸಂಜೆಯಾಗುತ್ತಲೇ ಕೆಲ ಪಡ್ಡೆ ಯುವಕರ ಗುಂಪು ಸೇರಿಕೊಂಡು ಗಾಂಜಾ ಹಾಗೂ ಮಾದಕ ವಸ್ತುಗಳ ಸೇವನೆಯಲ್ಲಿ ನಿರತರಾಗಿರುತ್ತಾರೆ.
ದ್ವಿಚಕ್ರ ವಾಹನಗಳ ಕರ್ಕಶ ಶಬ್ಧಗಳನ್ನು ಸೂಸುವ ಮೂಲಕ ವೇಗವಾಗಿ ವಾಹನಗಳನ್ನು ಚಲಾಯಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಅನಾಹುತಗಳು ಸಂಭವಿಸುವ ಮುನ್ನ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.