ಒಡೆಯನಪುರ, ಅ. 8: ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಗುರುತರÀ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಭಿಪ್ರಾಯ ಪಟ್ಟರು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ವಿದ್ಯಾಸಂಸ್ಥೆಯ ಭದ್ರಮ್ಮ ಮಹಾಂತಪ್ಪ ಪ್ರಾರ್ಥನಾ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೊಡ್ಲಿಪೇಟೆ ಹೋಬಳಿ ಘಟಕದ ವತಿಯಿಂದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಪ್ರೌಢಶಾಲಾ ಮತ್ತು ಪ.ಪೂ. ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಶುದ್ಧ ಕನ್ನಡದಲ್ಲಿ ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಭಾವಗೀತೆ ಸ್ಪರ್ಧೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇದೀಗ ಜಿಲ್ಲಾ ಕಸಾಪ ಘಟಕ ಶಾಲಾ- ಕಾಲೇಜುಗಳಲ್ಲಿರುವ ಗ್ರಂಥಾಲಯಕ್ಕೆ ನೀಡುತ್ತಿದೆ, ಅದೇ ಪ್ರಕಾರವಾಗಿ ಕಿರಿ ಕೊಡ್ಲಿ ವಿದ್ಯಾಸಂಸ್ಥೆಯ ಗ್ರಂಥಾಲಯ ಮತ್ತು ಕೊಡ್ಲಿಪೇಟೆ ಪ.ಪೂ. ಕಾಲೇಜಿನ ಗ್ರಂಥಾಲಯಕ್ಕೆ ತಲಾ 300 ಪುಸ್ತಕಗಳನ್ನು ಉಚಿತವಾಗಿ ನೀಡಲಿದ್ದು ಈ ಕಾರ್ಯ ಕ್ರಮವನ್ನು ಜಿಲ್ಲಾದ್ಯಂತ ಇರುವ ವಿದ್ಯಾಸಂಸ್ಥೆಗಳಿಗೆ ವಿಸ್ತರಿಸಲಾಗುವದೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ ಕನ್ನಡ ಭಾಷೆಯ ಬಗ್ಗೆ ಅರಿತುಕೊಳ್ಳುವ ಮೊದಲು ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಕನ್ನಡತನದ ಇತಿಹಾಸವನ್ನು ತಿಳಿದುಕೊಳ್ಳಬಹುದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕನ್ನಡದ ಪುಸ್ತಕಗಳನ್ನು ಓದುವದರ ಮೂಲಕ ಸಾಹಿತ್ಯ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದರು.
ಮುದ್ದಿಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸು ಏಕಾಗೃತೆಯ ಕಡೆಗೆ ವಾಲಬೇಕು, ಇಂದಿನ ವಿದ್ಯಾರ್ಥಿಗಳು ಟಿವಿ, ಸಿನಿಮಾ. ಮೊಬೈಲ್ ಮುಂತಾದ ಆಧುನಿಕತೆಯ ಕಡೆಗೆ ಲಕ್ಷ್ಯವನ್ನಿಡುತ್ತಾರೆ ಇದೇ ಆಸಕ್ತಿಯನ್ನು ಮಾತೃ ಭಾಷೆ, ಸಾಹಿತ್ಯ, ಉಪದೇಶ, ಹಾಗೂ ಶಾಲಾ-ಕಾಲೇಜುಗಳ ಪಠ್ಯ ಬೋಧನೆಗಳಲ್ಲಿ ಬೆಳೆಸಿಕೊಂಡರೆ ವ್ಯಕ್ತಿಗತವಾಗಿ ಹಾಗೂ ಬೌದ್ದಿಕವಾಗಿಯೂ ಬೆಳೆಯ ಬಹುದೆಂದರು.
ಕೊಡ್ಲಿಪೇಟೆ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಅಬ್ದುಲ್‍ರಬ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಪರ್ಧಾ ಕಾರ್ಯಕ್ರಮದ ಸಂಯೋಜಕ ಸುಂದರ್, ಜಿಲ್ಲಾ ಕಸಾಪ ಮಾಧ್ಯಮ ಕಾರ್ಯದರ್ಶಿ ಎನ್.ಎ. ಅಶ್ವಥ್ ಕುಮಾರ್, ಕೊಡ್ಲಿಪೇಟೆ ಕಸಾಪ ಹೋಬಳಿ ಕಾರ್ಯದರ್ಶಿ ಬೆಸೂರು ಶಾಂತೇಶ್, ವಿದ್ಯಾಸಂಸ್ಥೆ ಪ್ರಾಂಶುಪಾಲೆ ತನುಜ, ಉಪನ್ಯಾಸಕ ಸತೀಶ್ ಮುಂತಾದವರಿದ್ದರು.
- ವಿ.ಸಿ. ಸುರೇಶ್ ಒಡೆಯನಪುರ