ಮಡಿಕೇರಿ, ಅ. 8: ಮಡಿಕೇರಿ ನಗರದಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣದ ಆಶಯದೊಂದಿಗೆ, ಇಲ್ಲಿನ ‘ವೆಬ್ಸ್’ ಎದುರಿಗೆ ಕಳೆದ ಬೇಸಿಗೆಯಲ್ಲಿ ಆರಂಭಗೊಂಡಿದ್ದ ಕಾಮಗಾರಿ ಹಲವು ಎಡರು ತೊಡರುಗಳ ನಡುವೆ ಇದೀಗ ಮತ್ತೆ ಪುನರಾರಂಭಗೊಂಡಿದೆ. ವರ್ಷವೊಂದರೊಳಗೆ ಮುಂದಿನ ಡಿಸೆಂಬರ್ ಹೊತ್ತಿಗೆ ಉದ್ಘಾಟನೆಯ ಆಶಯವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಸಭೆಯ ಪ್ರಮುಖರು ಹೊರಗೆಡವಿದ್ದರು.

ಆ ಬೆನ್ನಲ್ಲೇ ನಿವೇಶನದ ಮಣ್ಣಿನ ಪರೀಕ್ಷೆ ಸೇರಿದಂತೆ ಯೋಜನೆಯ ನೀಲಿನಕ್ಷೆಯಲ್ಲಿ ಸಾಕಷ್ಟು ಮಾರ್ಪಾಡುಗೊಂಡ ಪರಿಣಾಮ ರೂ. 4.29 ಕೋಟಿ ವೆಚ್ಚದ ಕಾಮಗಾರಿ ನಿಗಧಿತ ಕಾಲಮಿತಿಯಲ್ಲಿ ನಿರ್ವಹಿಸಲು ಸಾಧ್ಯವಾಗಿಲ್ಲವೆಂದು ಮೈಸೂರು ಎಸ್‍ಕೆಎಸ್ ಕನ್ಸ್ಟ್ರಕ್ಷನ್ ಪ್ರಮುಖರು ಸಮಜಾಯಿಷಿ ನೀಡಿದ್ದಾರೆ.

ಖಾಸಗಿ ಬಸ್ ನಿಲ್ದಾಣಕ್ಕೆ ಕ್ರಿಯಾಯೋಜನೆ ರೂಪಿಸಿದ್ದ ನಗರ ಸಭೆಯು ಟೆಂಡರ್ ಪ್ರಕ್ರಿಯೆ ಪೂರೈಸಿ ಕೆಲಸ ಆರಂಭಿಸಿದ ವೇಳೆ ಅಡಿಪಾಯ ನಿರ್ಮಾಣ ಸಂದರ್ಭ ಕೆಸರು ಸಹಿತ ನೀರು ಕಾಣಿಸಿಕೊಂಡ ಬೆನ್ನಲ್ಲೇ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಇತರರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ವಿವಿಧೆಡೆ ಮೂರು ಬಾರಿ ಮಣ್ಣು ಪರೀಕ್ಷೆಯೊಂದಿಗೆ ಆಧಾರ ಸ್ತಂಭ ನಿರ್ಮಾಣದ ಆಳ ಮತ್ತು ಅಗಲ ಹೆಚ್ಚಿಸುವ ಮುಖಾಂತರ ಕೊಡಗಿನ ಮಳೆಗಾಲವನ್ನು ಗಮನದಲ್ಲಿ ಇರಿಸಿಕೊಂಡು ಕೆಲಸ ಕೈಗೊಳ್ಳಲಾಗುವದು ಎಂದು ಸಂಬಂಧಿಸಿದ ಇಂಜಿನಿಯರ್ ಭರತ್ ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.

ಅಲ್ಲದೆ, ಪ್ರಸಕ್ತ ಮಳೆಯಿಂದಾಗಿ ಕಾಮಗಾರಿಗೆ ಅಡಚಣೆಯಾಗಿದ್ದು, ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಚುರುಕಾಗಿ ಕೆಲಸ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ. ಸಂಬಂಧಿಸಿದ ಜಾಗ ಕೃಷಿ ಭೂಮಿಯಾಗಿದ್ದ ಹಿನ್ನೆಲೆಯಲ್ಲಿ ಕೆಲಸದ ಗುಣಮಟ್ಟ ಕಾಯ್ದುಕೊಳ್ಳಲು ಆಧಾರ ಸ್ತಂಭ ಹಂತದಲ್ಲೇ ಸಾಕಷ್ಟು ನೆಲ ಒಣಗಿಸಿ ಹಂತ ಹಂತವಾಗಿ ಕೆಲಸ ನಿರ್ವಹಿಸಬೇಕಿದೆ ಎಂದ ಅವರು, ಆ ಸಲುವಾಗಿಯೇ ಸಮಯಾವಕಾಶ ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ಮಳೆ ಬಾರದಿದ್ದರೆ ಮೂರು ತಿಂಗಳಿನಲ್ಲಿ ಕಾಮಗಾರಿಯನ್ನು ಮುಗಿಸುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಒಂದು ವೇಳೆ ಮಳೆಯಾಗುತ್ತಿದ್ದರೆ ಕೆಲಸ ಅನಿವಾರ್ಯವಾಗಿ ಮುಂದೆ ಸಾಗಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

ಮಿನಿ ವಿಧಾನ ಸೌಧ : ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿ ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿ ಕೂಡ ಇದೀಗ ಮತ್ತೆ ಶುರು ಆಗಿರುವದು ಗೋಚರಿಸಿದೆ. ಈ ಕಾಮಗಾರಿಯನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಮುಖಾಂತರ ಬೆಂಗಳೂರಿನ ಕೆ. ಬಾಲರಾಜ್ ಇನ್ಫ್ರಟೆಕ್ ಏಜೆನ್ಸಿ ಕೈಗೊಂಡಿದೆ. ಪ್ರಸಕ್ತ ಮೊದಲ ಹಂತದ ಕಾಮಗಾರಿಯು ಅಂದಾಜು ರೂ. 5 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಈ ಕಟ್ಟಡ ನಿರ್ಮಾಣದ ಎರಡನೇ ಹಂತದ ಕೆಲಸ ಸೇರಿದಂತೆ ಒಟ್ಟು ರೂ. 10 ಕೋಟಿ ವೆಚ್ಚದ್ದಾಗಿದೆ ಎಂದು ಕಾಮಗಾರಿ ಗುತ್ತಿಗೆದಾರರು ಸುಳಿವು ನೀಡಿದ್ದಾರೆ.

ಮಿನಿ ವಿಧಾನಸೌಧ ಯೋಜನೆಗೆ ಆರಂಭಿಕ 1.40 ಎಕರೆ ಜಾಗವನ್ನು ಜಿಲ್ಲಾಡಳಿತ ಕಲ್ಪಿಸಿದ್ದು, ಅನಂತರದಲ್ಲಿ ಮತ್ತೆ 27 ಸೆಂಟ್ ನಿವೇಶನ ಒದಗಿಸುವದರೊಂದಿಗೆ, ಭವಿಷ್ಯದಲ್ಲಿ ಈ ಮಿನಿ ವಿಧಾನಸೌಧದಲ್ಲಿ ರಾಜ್ಯ ಸರಕಾರದ ಮಂತ್ರಿಮಂಡಲ ಸಭೆಯನ್ನು ಕೂಡ ನಡೆಸಲು ಅನುಕೂಲವಾಗುವಂತೆ ವಿಶಾಲ ಸಭಾಂಗಣ ನಿರ್ಮಿಸ ಲಾಗುವದು ಎಂದು ಕೆಬಿಆರ್ ಸಂಸ್ಥೆಯ ಮೂಲಗಳು ತಿಳಿಸಿವೆ.