ಗೋಣಿಕೊಪ್ಪಲು, ಅ. 8: ವನವಾಸಿ ಕಲ್ಯಾಣ ಸಂಸ್ಥೆಯ ವತಿಯಿಂದ ತಾ. 14 ರಂದು ಆದಿವಾಸಿಗಳಿಗೆ ನಡೆಯುವ ರಾಜ್ಯಮಟ್ಟದ ಬಿಲ್ಲುಗಾರಿಕೆ ಹಾಗೂ ಮಾಡ್ರನ್ ಖೋಖೋ ಸ್ಪರ್ಧೆಗೆ ಕೊಡಗು ಜಿಲ್ಲೆಯ ಆಯ್ಕೆ ಪ್ರಕ್ರಿಯೆ ತಿತಿಮತಿ ಶಾಲಾ ಮೈದಾನದಲ್ಲಿ ಆರಂಭಗೊಂಡಿದೆ.

ಬಿಲ್ಲುಗಾರಿಕೆಯಲ್ಲಿ ಹೊರ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳಾದ ಸುಭಾಶ್ ಹಾಗೂ ಮಂಜುಳಾ ಸಿದ್ದಿ, ಮಾಡ್ರನ್ ಖೋಖೋ ತಂಡಕ್ಕೆ ಕಾಡ್ಯಮಾಡ ಸುಬ್ಬಯ್ಯ ಹಾಗೂ ಪರಮೇಶ್ ಆಯ್ಕೆ ನಡೆಸಿದರು.

ತಾ. 14 ರಂದು ಹಾತೂರು ಶಾಲಾ ಮೈದಾನದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ರಾಜ್ಯದ 16 ಜಿಲ್ಲೆಗಳಿಂದ ಸುಮಾರು 300 ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದರಂತೆ ಸ್ಪರ್ಧೆಗೂ ಮುನ್ನ ತರಬೇತಿ ನೀಡುವ ಉದ್ದೇಶದಂತೆ ಬಿಲ್ಲುಗಾರಿಕೆ ತರಬೇತಿ ಹಾಗೂ ಆಯ್ಕೆ ಶಿಬಿರ ಆರಂಭಗೊಂಡಿದೆ.

ಸಬ್ ಜೂನಿಯರ್ ವಿಭಾಗದಲ್ಲಿ 14 ರಿಂದ 17 ವಯೋಮಿತಿ, ಜೂನಿಯರ್ ವಿಭಾಗದಲ್ಲಿ 17 ರಿಂದ 20 ವಯೋಮಿತಿ, ಹಿರಿಯರ ವಿಭಾಗದಲ್ಲಿ 20 ರಿಂದ 35 ವಯೋಮಿತಿಯವರು ಬಿಲ್ಲುಗಾರಿಕೆ ಹಾಗೂ ಖೋ ಖೋ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಯ್ಕೆ ಸಂದರ್ಭ ಹಿರಿಯ ಕ್ರೀಡಾಪಟು ಐನಂಡ ಜಪ್ಪು, ಆರ್‍ಎಸ್‍ಎಸ್ ಪ್ರಮುಖ ಚೆಕ್ಕೇರ ಮನು ಕಾವೇರಪ್ಪ ಪಾಲ್ಗೊಂಡಿದ್ದರು.