ಮಡಿಕೇರಿ, ಅ. 8: ಸಮುದಾಯ ಬಾಂಧವರ ಶೈಕ್ಷಣಿಕ, ಸಾಮಾಜಿಕ ಸ್ವಾವಲಂಬನೆಗಳನ್ನು ಸಾಧಿಸುವ ಹೊಣೆಗಾರಿಕೆ ಸಂಘಟನೆಗಳ ಮೇಲಿರಬೇಕು ಎಂದು ಅಖಿಲ ಭಾರತ ಬಿಲ್ಲವರ ಒಕ್ಕೂಟದ ಕಾರ್ಯಕಾರಿ ಸದಸ್ಯ ಸೀತಪ್ಪ ಕುಡೂರು ಕರೆ ನೀಡಿದರು.ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತೋತ್ಸವ ಸಮ್ಮೇಳನ ಮತ್ತು ವಿದ್ಯಾರ್ಥಿ ವೇತನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಂಘಟನೆಯಲ್ಲಿ ಸಮುದಾಯದ ಮುಖಂಡರು ತೆಗೆದುಕೊಳ್ಳುವ ನಿರ್ಣಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮುಟ್ಟುವಂತಿರಬೇಕು. ಜಿಲ್ಲೆಯಲ್ಲಿ ಬಿಲ್ಲವ ಸಮಾಜ ಬಾಂಧವರ ಸಂಖ್ಯೆ ಸುಮಾರು 2 ಲಕ್ಷಕ್ಕೂ ಮೀರಿದ್ದು, ಇವರಲ್ಲಿ ಸಾಕಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದ್ದು, ಇವರನ್ನು ಗುರುತಿಸಿ ಸಹಕಾರ ನೀಡುವಲ್ಲಿ ಸಮಾಜ ಸೇವಾ ಸಂಘ ಮುಂದಾಗಬೇಕು ಎಂದು ತಿಳಿಸಿದರು.

ಇಂದು ಕೃಷಿ, ವೈದ್ಯ ವೃತ್ತಿಯಲ್ಲಿರುವ ನಮ್ಮ ಸಮಾಜದವರನ್ನು ನಾವೇ ಏಳಿಗೆ ಮಾಡಬೇಕು. ಜಾತಿ ಭೇದ, ಶೋಷಣೆಯ ವಿರುದ್ದ ಹೋರಾಡಿದ ಕೋಟಿ ಚೆನ್ನಯ್ಯ ಕಟ್ಟಿದ ಸಮಾಜವನ್ನು ಬೆಳೆಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.ವೀರಾಜಪೇಟೆ ತಾಲೂಕು ಬಿಲ್ಲವ ಸಮಾಜ ಅಧ್ಯಕ್ಷ ಬಿ.ಎಸ್. ಚಂದ್ರ ಶೇಖರ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಾ ದರ್ಶದೊಂದಿಗೆ ಮುನ್ನಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಸ್. ಆನಂದ ರಘು ಮಾತನಾಡಿ, ನಾರಾಯಣ ಗುರುಗಳ ತತ್ವಾದರ್ಶ ಮುಂದಿಟ್ಟುಕೊಂಡು ಸರ್ವರ ಕಲ್ಯಾಣಕ್ಕೆ ಸಂಘಟನೆ ದುಡಿಯಲಿದೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘ ಹುಟ್ಟಿಕೊಂಡಿದೆ. ಒಗ್ಗಟ್ಟಿನಿಂದ ಸಂಘಟನೆ ಬಲಯುತವಾಗಲು ಸಾಧ್ಯ.

(ಮೊದಲ ಪುಟದಿಂದ) ಈ ದಿಸೆಯಲ್ಲಿ ಯುವಕರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ 2016- 17ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸೋಮವಾರ ಪೇಟೆ ಸೇವಾ ಸಮಿತಿ ಅಧ್ಯಕ್ಷ ಎನ್.ಡಿ. ಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಸದಸ್ಯೆ ಕಲಾವತಿ ಪೂವಪ್ಪ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ರಾಜಶೇಖರ್, ಉಪಾಧ್ಯಕ್ಷ ಸದಾನಂದ ಬಂಗೇರ, ಬಿ.ಎಂ. ಎಲ್ಯಣ್ಣ ಪೂಜಾರಿ ಮೊದಲಾದವರು ಹಾಜರಿದ್ದರು.